ದೊಡ್ಡಬಳ್ಳಾಪುರ: ಲಯನ್ಸ್ ಛಾರೀಟಿಸ್ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನಗರಸಭೆಯ ಪೌರಕಾರ್ಮಿಕರಿಗೆ ಪ್ರತಿ ನಿತ್ಯ ಆಯುರ್ವೇದದ ಕಷಾಯವನ್ನು ವಿತರಿಸುವ ಕಾರ್ಯಕ್ರಮಕ್ಕೆ ನಗರದ ಪುರಭವನದಲ್ಲಿ ಚಾಲನೆ ನೀಡಲಾಯಿತು.
ಲಯನ್ಸ್ ಛಾರೀಟಿಸ್ ಟ್ರಸ್ಟ್ ಉಪಾದ್ಯಕ್ಷ ಹುಲಿಕಲ್ ನಟರಾಜ ಮಾತನಾಡಿ,
ನಮ್ಮ ಪಾರಂಪರಿಕೆ ವೈದ್ಯಕೀಯ ಪದ್ದತಿಗಳಲ್ಲಿ ಔಷಗಿಂತ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ವೃದ್ದಿಸುವ ಅಂಶಗಳಿವೆ.ಇಂದು ಕೊವಿಡ್–19 ಪರಿಣಾಮದಿಂದಾಗಿ ಇಂತಹ ಔಷಧ ಪದ್ದತಿಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲ ವೈದ್ಯ ಪದ್ದತಿ ಶಾಶ್ವತ ರೋಗ ನಿವಾರಕವಾಗಿದೆ ಅದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಈ ಪದ್ದತಿಯಲ್ಲಿ ನಿವಾರಣೆ ನಿಧಾನವಾದರೂ ಶಾಶ್ವತ ಪರಿಹಾರ ವಾಗಲಿದ್ದು, ಈ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಸ್.ಮಂಜುನಾಥ್ ಮಾತನಾಡಿ,ಕೊರೋನಾ ಸಮಯದಲ್ಲಿ ಕೆಲಸ ಮಾಡುವುದು ದುಸ್ಥರವಾದರೂ ಸಾಮೂಹಿಕ ಆರೋಗ್ಯದ ದೃಷ್ಟಿಯಿಂದ ಅಂತರ ಕಾಯ್ದುಕೊಂಡು ನಾವೆ ಜಾಗೃತರಾಗಿ ಜೀವನ ಸಾಗಿಸಬೇಕಾಗಿದೆ. ನಗರದಲ್ಲಿ ಕೊವಿಡ್–೧೯ ಸೋಂಕು ಹರಡದಂತೆ ಕೊರೊನಾ ವಾರಿಯರ್ಸ್ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪೌರ ಕಾರ್ಮಿಕರಿಗೆ ಆಯುರ್ವೇದ ಹೋಮಿಯೋಪಥಿಕ್ ಔಷಗಳನ್ನು ವಿತರಿಸಲಾಗಿದೆ. ಲಯನ್ಸ್ ಕ್ಲಬ್ ವತಿಯಿಂದ ಕೊರೊನಾ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಲಯನ್ಸ ಕ್ಲಬ್ ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸ್, ಲಯನ್ ಲಕ್ಕೂರು ಪ್ರದೀಪ್ ಹಾಜರಿದ್ದರು.