ದೊಡ್ಡಬಳ್ಳಾಪುರ: ದೇಶದ ಪ್ರತಿಯೊಬ್ಬ ಪ್ರಜೆಯೂ ಸಾಕ್ಷರರಾಗುವವರೆಗೂ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಹೇಳಿದರು.

ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿದ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇ. 77.93 ರಷ್ಟು ಇದೆ. ಸಾಕ್ಷರತಾ ಆಂದೋಲನ ಪ್ರಾರಂಭವಾದಾಗ ಪ್ರತಿಯೊಂದು ಹಳ್ಳಿಗಳಲ್ಲಿ ಮನೆಗಳಿಗೆ ತೆರಳಿ, ಅಕ್ಷರ ಜ್ಞಾನದ ಕುರಿತು ಜಾಗೃತಿ ಮೂಡಿಸಲಾಗಿದ್ದು, ಇದರ ಪರಿಣಾಮ ಪ್ರಸ್ತುತ ದಿನಮಾನಗಳಲ್ಲಿ ಸ್ತ್ರೀಯರು ಸ್ವತಃ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಮುಖ್ಯವಾಹಿನಿಗೆ ಮುಖ ಮಾಡಿ ಸಮಾಜದ ಲೆಕ್ಕಾಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಕಲ ಸಮಸ್ಯೆಗಳಿಗೂ ಅನಕ್ಷರತೆಯೇ ಕಾರಣವಾಗಿದೆ. ಅಂಧಾನುಕರಣೆ, ಮೂಢನಂಬಿಕೆ ಹಾಗೂ ಬಡತನಗಳಿಗೆ ಅನಕ್ಷರತೆಯೇ ಮೂಲವಾಗಿದೆ.
ಶಿಕ್ಷಣದಿಂದ ಮಾತ್ರ ಜನರು ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು ಪ್ರಸ್ತುತ ದಿನಗಳಲ್ಲಿ ಸಾಕ್ಷರರಿಗೆ ಮಾತ್ರ ಸಮಾಜದಲ್ಲಿ ಬೆಲೆ ಇದ್ದು, ಪ್ರತಿಯೊಂದು ಹಳ್ಳಿಗಳ ಮೂಲೆಗೂ ಅಕ್ಷರ ಜ್ಞಾನ ಪಸರಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಎನ್.ನಾಗರಾಜ ಅವರು ಮಾತನಾಡಿ ರಾಷ್ಟ್ರ, ರಾಜ್ಯಮಟ್ಟದಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗೆ ಅನಕ್ಷರಸ್ಥರನ್ನು, ಅಕ್ಷರಸ್ಥರನ್ನಾಗಿ ಪರಿವರ್ತಿಸಬೇಕು. ಗ್ರಾಮೀಣ ಮಟ್ಟದಲ್ಲಿನ ಅಲ್ಪಸಂಖ್ಯಾತರ, ಪರಿಶಿಷ್ಟ ವರ್ಗಗಳ ಮಹಿಳೆಯರ ಮತ್ತು ಪುರುಷರ ಶೈಕ್ಷಣಿಕ ಮಟ್ಟ ಸುಧಾರಣೆಗಾಗಿ ಸಾಕ್ಷರತಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಹನುಮಂತಪ್ಪ, ಜಿಲ್ಲಾ ಕಾರ್ಯಕ್ರಮ ಸಹಾಯಕ ಪ್ರಸನ್ನ ಕುಮಾರ್, ಸಾಕ್ಷರತಾ ಸಂಯೋಜಕರು ಸೇರಿದಂತೆ ಇತರರು ಉಪಸ್ಥಿತರಿದ್ದರು
