ದೊಡ್ಡಬಳ್ಳಾಪುರ: ಕರೊನಾ ಸೋಂಕಿಗೆ ಒಳಗಾಗಿ,ಗುಣಮುಖರಾಗಿದ್ದ ನಗರಸಭೆ ನೌಕರ ಶ್ರೀನಿವಾಸ್ ಪ್ಲಾಸ್ಮಾ ದಾನ ಮಾಡಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿರುವ ಶ್ರೀನಿವಾಸ್, ಅವರಿಗೆ ಕಳೆದ ಜುಲೈ 25 ರಂದು ಕರೊನಾ ಪಾಸಿಟಿವ್ ಆಗಿತ್ತು. ನಗರದ ಕೋವೀಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಕ್ವಾರಂಟೈನ್ ನಲ್ಲಿದ್ದರು. ಕಳೆದ ಕೆಲ ದಿನಗಳ ಹಿಂದಷ್ಟೆ ಕೆಲಸಕ್ಕೆ ಹಾಜರಾಗಿದ್ದ ಶ್ರೀನಿವಾಸ್, ಕರೊನಾ ಪಾಸಿಟಿವ್ ಆಗಿರುವ ವ್ಯಕ್ತಿಯೋಬ್ಬರಿಗೆ ಬೆಂಗಳೂರಿಗೆ ತೆರಳಿ ಪ್ಲಾಸ್ಮಾ ದಾನ ಮಾಡಿದ್ದಾರೆ.
ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಅವಿರತ ಶ್ರಮಿಸಿ, ಸೋಂಕಿಗೆ ಒಳಗಾಗಿದ್ದ ಶ್ರೀನಿವಾಸ್ ಚಿಕಿತ್ಸೆ ಪಡೆದು ನಂತರ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇದೀಗ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೆ ಮಾದರಿ ಜೊತೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಕರೊನಾ ಸೋಂಕಿಗೆ ಒಳಗಾದವರಿಗೆ,ಸೋಂಕಿನಿಂದ ಗುಣಮುಖರಾದವರ ಪ್ಲಾಸ್ಮಾ ನೀಡಿದರೆ ತ್ವರಿತವಾಗಿ ಆರೋಗ್ಯವಾಗುತ್ತಾರೆ.ಪ್ಲಾಸ್ಮಾ ನೀಡುವುದರಿಂದ ಯಾವುದೇ ಆತಂಕವಿಲ್ಲ,ಮತ್ತೋಬ್ಬರ ಜೀವವನ್ನು ಉಳಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ಶ್ರೀನಿವಾಸ್ ಹರಿತಲೇಖನಿ ಮೂಲಕ ಕರೊನಾದಿಂದ ಗುಣಮುಖರಾಗಿರುವ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
ಎಷ್ಟೇ ಜಾಗೃತಿ ಮೂಡಿಸಿದರೂ ಬಹುತೇಕರು ಕರೊನಾದಿಂದ ಗುಣಮುಖರಾದ ಬಳಿಕ ಪ್ಲಾಸ್ಮಾ ದಾನ ಮಾಡಲು ಹಿಂದೆ ಮುಂದೆ ನೋಡುತ್ತಾರೆ.ಇಂತಹ ಜನರ ನಡುವೆ ಶ್ರೀನಿವಾಸ್ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

