ಹರಿತಲೇಖನಿ ದೊಡ್ಡಬಳ್ಳಾಪುರ: ಮಣ್ಣನ್ನು ಫಲವತ್ತಾಗಿಸುವಲ್ಲಿ ನಮ್ಮ ಹಿರಿಯರು ಅನುಸರಿಸುತ್ತಿದ್ದ ಸಾಂಪ್ರದಾಯಿಕ ವಿಧಾನ ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ. ಅಂದರೆ ಯಾವುದೇ ಬೆಳೆ ಬೆಳೆಯುವ ಮುನ್ನ ಹಸಿರೆಲೆ ಗೊಬ್ಬರದ ಗಿಡಗಳನ್ನು ಬೆಳೆಸಿ ಮಣ್ಣಿಗೆ ಸೇರಿಸುವ ಕಡೆಗೆ ರೈತರು ಹೆಚ್ಚು ಒಲವು ತೋರುತ್ತಿದ್ದಾರೆ.
ಮಣ್ಣಿನಲ್ಲಿ ಸಾವಯವ ಪದಾರ್ಥಗಳು ಹೆಚ್ಚಾಗಿದ್ದರೆ ಮಾತ್ರ ಯಾವುದೆ ಬೆಳೆ ಸಮೃದ್ಧವಾಗಿ ಬೆಳೆಯಲು, ಉತ್ತಮ ಇಳುವರಿ ಬರಲು ಸಾಧ್ಯ. ಇಂತಹ ಸಾವಯವ ಪದಾರ್ಥವನ್ನು ಮಣ್ಣಿಗೆ ಸೇರಿಸುವಲ್ಲಿ ಗೊಬ್ಬರದ ಗಿಡ ಅಥವಾ ಸೆಣಬು ಮುಖ್ಯವಾಗಿದೆ.
ಸೆಣಬಿನ ಬೀಜವನ್ನು ಸಾಮಾನ್ಯ ಉಳುಮೆ ಮಾಡಿದ ನಂತರ ಒಂದು ಎಕರೆಗೆ 25 ರಿಂದ 30 ಕೆಜಿಯಷ್ಟು ಬೀಜವನ್ನು ಚೆಲ್ಲಿ ಮಣ್ಣಿನಲ್ಲಿ ಸೇರುವಂತೆ ಉಳುಮೆ ಮಾಡಬೇಕು. ಬಿತ್ತನೆ ಮಾಡಿದ 45 ರಿಂದ 50 ದಿನಗಳಲ್ಲಿ ಸೆಣಬಿನ ಗಿಡಗಳು ಸಮೃದ್ಧವಾಗಿ ಬೆಳೆದು ಹೂವು ಬಿಡಲು ಆರಂಭಿಸುತ್ತವೆ. ಹೂವು ಬರುವ ಸಂದರ್ಭದಲ್ಲಿ ಭೂಮಿಯಲ್ಲಿ ಸೇವಾಂಶ ಕಡಿಮೆ ಇರುವುದನ್ನು ಗಮನಿಸಿ ಉಳುವೆ ಮಾಡುವ ಮೂಲಕ ಸೆಣಬಿನ ಸೊಪ್ಪು ಮಣ್ಣಿಗೆ ಸೇರುವಂತೆ ಮಾಡಬೇಕು. ಮಣ್ಣಿನಲ್ಲಿ ಹೆಚ್ಚು ತೇವಾಂಶ ಇದ್ದು ಉಳುಮೆ ಮಾಡಲು ಅವಕಾಶ ಇಲ್ಲದಿದ್ದರೆ ಕುಡುಗೊಲಿನಿಂದ ಗಿಡಗಳನ್ನು ಕತ್ತರಿಸಿ ಮೆಣ್ಣಿಗೆ ಹೊದಿಕೆಯಾಗುವಂತೆ ಮಾಡಬೇಕು. 45 ದಿನಗಳ ನಂತರ ಹೂವು ಹೆಚ್ಚಾಗಿ ಬಂದು ಗಿಡ ಬಲಿತರೆ ಹಸಿರು ಎಲೆಗಳ ಪ್ರಮಾಣ ಕಡಿಮೆಯಾಗಲಿದೆ.
ಮಿಶ್ರ ಬೀಜಗಳು ಮುಖ್ಯ: ಹಸಿರು ಎಲೆ ಗೊಬ್ಬರಕ್ಕಾಗಿ ಯಾವುದೇ ರೀತಿಯ ಬೀಜವನ್ನು ಚೆಲ್ಲುವಾಗ ಒಂದೇ ರೀತಿಯ ಬೀಜಗಳನ್ನು ಚೆಲ್ಲುವ ಬದಲಿಗೆ ಸೆಣಬಿನೊಂದಿಗೆ ಊರುಳಿ, ಹುಚ್ಚಳ್ಳು, ಅಲಸಂದೆ, ಅವರೆ, ಸಾಸುವೆ,ಉದ್ದು,ಹೆಸರು ಕಾಳು, ಕಡಳೆ ಕಾಳು, ಕೊತ್ತಂಬರಿ ಬೀಜ ಹೀಗೆ ನಾನಾ ರೀತಿಯ ಬೀಜಗಳನ್ನು ಮಿಶ್ರಣ ಮಾಡಿ ಚೆಲ್ಲುವುದು ಮಣ್ಣಿನ ಫಲವತ್ತತೆ ದೃಷ್ಠಿಯಿಂದ ಮುಖ್ಯ ಎನ್ನುತ್ತಾರೆ ಪ್ರಗತಿಪರ ರೈತ ನಟರಾಜ್.
ಸೆಣಬಿನಷ್ಟು ವೇಗವಾಗಿ ಊರುಳಿ, ಅವರೆ, ಅಲಸಂದೆ, ಸಾಸಿವೆ ಮತ್ತಿತರೆ ಗಿಡಗಳು ಬೆಳೆಯುವುದಿಲ್ಲ, 45 ರಿಂದ 50 ದಿನಗಳಲ್ಲಿ ಕಟಾವಿಗು ಬರುವುದಿಲ್ಲ. ಆದರೆ ಒಂದೊಂದು ರೀತಿಯ ಗಿಡಗಳ ಗುಣ ಲಕ್ಷಣ, ಮಣ್ಣಿನ ಫಲತ್ತತೆಗೆ ತಮ್ಮದೇ ಭಿನ್ನ ರೀತಿಯ ಸಾವಯವ ಪದಾರ್ಥಗಳನ್ನು ಕೊಡುಗೆಯಾಗಿ ನೀಡುತ್ತವೆ. ಮಣ್ಣು ಫಲವತ್ತುಗೊಳ್ಳುವ ಹಾಗೂ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಸಹಕಾರಿಯಾಗಲಿವೆ.
ಯಾವುದೇ ಬೆಳೆ ಉತ್ತಮ ಫಸಲು ನೀಡಲು ಮಣ್ಣಿನಲ್ಲಿ 16 ಬಗೆಯ ಪೋಷಕಾಂಶಗಳು ಕಡ್ಡಾಯವಾಗಿ ಇರಲೇ ಬೇಕು ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಪೋಷಕಾಂಶಗಳ ವೃದ್ಧಿಗೆ ಏಕ ಬೆಳೆಯ ಹಸಿರು ಎಲೆ ಗೊಬ್ಬರ ಒಂದೇ ಸಹಕಾರಿಯಾಗುವುದಿಲ್ಲ. ಹಸಿರು ಎಲೆ ಗೊಬ್ಬರಕ್ಕೆ ಸೆಣಬಿನಷ್ಟೇ ಊರುಳಿಯು ಸಹ ಮುಖ್ಯ ಬೆಳೆಯಾಗಿದೆ.
ಬಿತ್ತನೆ ಸಮಯ: ಸೆಣಬನ್ನು ಮುಂಗಾರು ಆರಂಭಕ್ಕು ಮುನ್ನ ಕನಿಷ್ಟ ಪ್ರಮಾಣದಲ್ಲಿ ಉಳುಮೆ ಮಾಡಿ ಬೀಜ ಚೆಲ್ಲಬಹುದಾಗಿದೆ. ಇದಲ್ಲದೆ ಹೆಚ್ಚು ಮಳೆ ಬರುವ ಸಮಯವನ್ನು ಹೊರತು ಪಡಿಸಿ ಯಾವುದೇ ಋತುಮಾನದಲ್ಲಿ ಬೇಕಿದ್ದರು ಸೆಣಬನ್ನು ಬೆಳಯಬಹುದಾಗಿದೆ. ಸೆಣಬು ಬೆಳೆಯಲು ಯಾವುದೇ ರೀತಿಯ ರಸಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರದ ಅಗತ್ಯ ಇರುವುದಿಲ್ಲ. ಸೆಣಬಿನ ಬೀಜ ಉತ್ಪಾದಿಸಿಕೊಳ್ಳಬೇಕಿದ್ದರೆ ನಂವೆಂಬರ್ ನಂತರ ಬೀಜ ಚೆಲ್ಲಿದರೆ ಮಳೆ ಕಡಿಮೆಯಾಗುವ ವೇಳೆಗೆ ಹೂವು ಬಿಟ್ಟು ಬೀಜ ಬಲಿಯಲು ಅನುಕೂಲವಾಗಲಿದೆ.
ತೆಂಗು, ಅಡಿಕೆ, ಬಾಳೆ, ಸಪೋಟೋ, ಮಾವು ಸೇರಿದಂತೆ ಯಾವುದೇ ಬೆಳೆಯ ನಡುವೆ ಇದನ್ನು ಅಂತರ ಬೆಳೆಯಾಗಿ ಬೆಳೆದು ಮಣ್ಣಿಗೆ ಸೇರುವಂತೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಬೆಳೆ ಬೆಳೆಯುವ ಜಮೀನಿಗೆ ಹೊರಗಿನಿಂದ ತಂದು ಒಳಸುರಿ ಸುರಿಯುವುದು ಕಡಿಮೆಯತಾಗಲಿದೆ ಎನ್ನುವುದು ಬಹುತೇಕ ಹಿರಿಯ ರೈತರ ಅನುಭವದ ಮಾತು.

