ದೊಡ್ಡಬಳ್ಳಾಪುರ: ಇಡೀ ದೇಶದ ಜನ ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಶಾಸನಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ವಿರೋಧಿ ಆಡಳಿತವಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಪ್ರಸನ್ನ ದೂರಿದ್ದಾರೆ.
ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸ.21 ರಂದು ವಿವಿಧ ಸಂಘಟನೆಗಳೊಂದಿಗೆ ವಿಧಾನ ಸೌಧ ಮುತ್ತಿಗೆ ಹಾಕಲಾಗುವುದು. ನಮ್ಮ ಮನವಿಗೆ ಸರ್ಕಾರ ಸ್ಪಂಧಿಸದೇ ಇದ್ದರೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಚೀನಾ ಸೈನಿಕರು ನಮ್ಮ ಗಡಿಯಲ್ಲಿ ನುಗ್ಗಿ ನಮ್ಮ ಯೋಧರನ್ನು ಕೊಂದಾಗ ದೇಶದ ಭದ್ರತೆಯ ಕಡೆಗೆ ಇಡೀ ದೇಶದ ಜನ ಚಿಂತಿಸುತ್ತಿದ್ದರು. ಆದರೆ ಪ್ರಧಾನ ಮಂತ್ರಿ ನರೇಂದ್ರಮೋದಿ ಮಾತ್ರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವಲ್ಲಿ ಉತ್ಸುಕರಾಗಿದ್ದರು. ಇದೇ ರೀತಿ ರಾಜ್ಯ ಸರ್ಕಾರ ಭೂ ಸೂಧಾರಣ ತಿದ್ದುಪಡಿ ಕಾಯ್ದೆ ಸಹ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸುವುದೇ ಆಗಿದೆ ಎಂದರು.
ರಾಜ್ಯ ರೈತ ಸಂಘದ ರಾಜ್ಯ ಘಕದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ವಿದ್ಯುತ್ ಕಂಪನಿಗಳನ್ನು ಸಂಪೂರ್ಣವಾಗಿ ಖಾಸಗಿ ಕಂಪನಿಗಳಿಗೆ ವಹಿಸುವ ಮೂಲಕ ಕೃಷಿಗೆ ಉಚಿತ ವಿದ್ಯುತ್ ಪೂರೈಕೆ ನಿಲ್ಲಿಸಲು ಸರ್ಕಾರ ಸಿದ್ದತೆಗಳನ್ನು ನಡೆಸಿದೆ. ರೈತ ವಿರೋಧಿ ಕಾಯ್ದೆಗಳ ಜಾರಿ ಮೂಲಕ ರೈತರು ಕೃಷಿಯಿಂದ ತಾವಾಗಿಯೇ ವಿಮುಖರಾಗುವಂತೆ ಮಾಡಲಾಗುತ್ತಿದೆ. ಇಂತಹ ರೈತ ವಿರೋಧಿ ನೀತಿಗಳ ವಿರುದ್ದ ರಾಜ್ಯದ ಎಲ್ಲಾ ಸಂಘಟನೆಗಳು ಒಟ್ಟುಗೂಡಿ ಬೆಂಗಳೂರಿನಲ್ಲಿ ಸೆ.21 ರಂದು ನಡೆಸುತ್ತಿರುವ ಐತಿಹಾಸಿಕ ಹೋರಾಟಕ್ಕೆ ರೈತರಷ್ಟೇ ಅಲ್ಲದೆ ಎಲ್ಲಾ ವರ್ಗದ ಜನರು ಬೆಂಬಲಿಸಬೇಕಿದೆ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆರ್.ಎಸ್.ಸತೀಶ್, ತಾಲ್ಲೂಕು ಕಾರ್ಯದರ್ಶಿ ಶಿವರಾಜ್ ಶಿವಪುರ, ದೇವನಹಳ್ಳಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ತೂಬಗೆರೆ ಹೋಬಳಿ ಘಟಕದ ಅಧ್ಯಕ್ಷ ಮುನಿನಾರಾಯಣಪ್ಪ, ಮುಖಂಡರಾದ ವಸಂತ್, ವಾಸು, ಶಿರವಾರರವಿ, ಕಾಂತರಾಜ್,ಮಹದೇವ್,ಕುಮಾರ್ ಇದ್ದರು.

