ದೊಡ್ಡಬಳ್ಳಾಪುರ: ಚುನಾವಣೆ ಘೋಷಣೆಯಾಗಿರುವ ತಾಲೂಕಿನ ಎಲ್ಲಾ 26 ಗ್ರಾಮಪಂಚಾಯಿತಿಗಳಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ.
ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಕಚೇರಿಯಲ್ಲಿ ಇಂದು ನಡೆದ ಗ್ರಾಮಪಂಚಾಯಿತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ ಹರಿತಲೇಖನಿಗೆ ತಿಳಿಸಿದ್ದಾರೆ.
ಗ್ರಾಪಂ ಚುನಾವಣೆ ಕುರಿತು ಪಕ್ಷದ ವಿವಿಧ ಘಟಕಗಳ ಮುಖಂಡರ ಸಲಹೆಯ ಮೇರೆಗೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆಯಿಲ್ಲದೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಣಯಿಸಲಾಗಿದೆ. ಅಲ್ಲದೆ ಗ್ರಾಮಪಂಚಾಯಿತಿ ವ್ಯಾಪ್ತಿಯ ವಾರ್ಡ್ ವಾರು ಆಕಾಂಕ್ಷಿಗಳ ಪಟ್ಟಿ ಸಿದ್ದಪಡಿಸಲು ಹೋಬಳಿ ಹಾಗೂ ಗ್ರಾಪಂ ವ್ಯಾಪ್ತಿಯ ಘಟಕಗಳ ಮುಖಂಡರಿಗೆ ಸೂಚನೆ ನೀಡಲಾಗಿದ್ದು, ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದೆಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಗ್ರಾಮಪಂಚಾಯಿತಿ ಚುನಾವಣೆಗೆ ಜೆಡಿಎಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಹೆಚ್ಚಿನ ಒತ್ತು ನೀಡಲಾಗುವುದು, ಯಾವುದೇ ಗೊಂದಲಗಳಿಲ್ಲದ ಜೆಡಿಎಸ್ ಬೆಂಬಲಿತ ಅರ್ಹ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲು ಆಯ್ಕೆ ಮಾಡುವಂತೆ ತಿಳಿಸಿದ್ದಾರೆ ಎಂದರು.
ಸಭೆಯಲ್ಲಿ ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ನಗರ ಅಧ್ಯಕ್ಷ ವಿ.ಎಸ್.ರವಿಕುಮಾರ್, ಯುವಘಟಕದ ಅಧ್ಯಕ್ಷ ಮಂಜುನಾಥ್ ಮಿಲ್ಟ್ರಿ, ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷ ಸತೀಶ್, ಸಾಸಲು ಹೋಬಳಿ ಉಸ್ತುವಾರಿ ಪಿ.ಬಿ.ರಾಜ್ ಗೋಪಾಲ್ ಸೇರಿದಂತೆ ವಿವಿಧ ಘಟಕಗಳ ಮುಖಂಡರು ಇದ್ದರು.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಫಾಲೋ ಮಾಡಿ.

