ದೊಡ್ಡಬಳ್ಳಾಪುರ: ಭಗವಾನ್ ವಿಷ್ಣುವಿನ 4ನೇ ಅವತಾರವಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಯಂತಿಯನ್ನು (Sri Lakshmi Narasimha Swamy Jayanti) ತಾಲೂಕಿನ ಹೊಸಹಳ್ಳಿಯ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ವೈಶಾಖ ಶುದ್ಧ ಚತುರ್ದಶಿಯಂದು ಆಚರಿಸಲಾಗುವ ಈ ದಿನದ ಅಂಗವಾಗಿ, ಹೊಸಹಳ್ಳಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜೆ ನೆರವೇರಿಸಲಾಯಿತು.
ಪೌರಾಣಿಕ ಹಿನ್ನೆಲೆ: ಭಗವಾನ್ ವಿಷ್ಣುವು ಹಿರಣ್ಯಕಶಿಪುವಿನ ಅಟ್ಟಹಾಸವನ್ನು ಕೊನೆಗೊಳಿಸಲು ಮತ್ತು ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಸಿಂಹದ ಮುಖ ಮತ್ತು ಮನುಷ್ಯನ ದೇಹದೊಂದಿಗೆ ನರಸಿಂಹ ಸ್ವರೂಪಿಯಾಗಿ ಕಾಣಿಸಿಕೊಂಡರು.
ದೊಡ್ಡಬಳ್ಳಾಪುರದಲ್ಲಿ ಸಂಭ್ರಮದ ಹಸೀ ಕರಗ: ನಾಳೆ ವೈಭವದ ಕರಗ ಉತ್ಸವಕ್ಕೆ ನಗರ ಸಜ್ಜು
ದೊಡ್ಡಬಳ್ಳಾಪುರ: ನಗರದ ಚಿಕ್ಕಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಮೇ 1ರಂದು ನಡೆಯಲಿರುವ ಶ್ರೀ ಆದಿಶಕ್ತ್ಯಾತ್ಮಕ ದ್ರೌಪದಾದೇವಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ ಹಸೀ ಕರಗ ಉತ್ಸವವು ಗುರುವಾರ ಬೆಳಗಿನ ಜಾವದಂದು ಶ್ರದ್ಧಾ ಭಕ್ತಿ ಸಂಭ್ರಮದಿಂದ ನೆರವೇರಿತು.
ಹೊಸಕೋಟೆಯ ಉಪ್ಪಾರಹಳ್ಳಿಯ ಪೂಜಾರಿ ವೈ.ಭೀಮರಾಜ್ ಅವರು ಮಲ್ಲಿಗೆ ಹೂವಿನಿಂದ ವಿಶೇಷವಾಗಿ ಸಿಂಗರಿಸಲಾಗಿದ್ದ ಹಸೀ ಕರಗವನ್ನು ಹೊತ್ತು ಕರಗದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ನಗರದ ಗಗನಾರ್ಯಯಸ್ವಾಮಿ ಮಠದಿಂದ ಹೊರಟ ಹಸೀ ಕರಗ ಉತ್ಸವವು ಏಳು ಸುತ್ತಿನ ಕೋಟೆ, ಸಪ್ತಮಾತೃಕಾ ಮಾರಿಯಮ್ಮ ದೇವಾಲಯ, ಕೋಟೆ ರಸ್ತೆ, ಹಳೇ ಬಸ್ ನಿಲ್ದಾಣ, ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯ ಮೊದಲಾದ ಕಡೆ ಸಂಚರಿಸಿ ಧರ್ಮರಾಯಸ್ವಾಮಿ ದೇವಾಲಯದ ಬಳಿ ಆಗಮಿಸಿತು. ಹಸೀ ಕರಗ ಉತ್ಸವವನ್ನು ವೀಕ್ಷಿಸಲು ನೂರಾರು ಜನ ನೆರೆದಿದ್ದರು.
ಮೇ.1(ನಾಳೆ): ಕರಗ ಮಹೋತ್ಸವ
ಶ್ರೀ ಆದಿಶಕ್ತ್ಯಾತ್ಮಕ ದ್ರೌಪದಾದೇವಿ ಅಮ್ಮನವರ ಕರಗ ಮಹೋತ್ಸವದ ಮೇ1 ರಂದು ನಡೆಯಲಿದೆ. ರಾತ್ರಿ 11 ಕ್ಕೆ ದೇವಾಲಯದಿಂದ ಹೊರಟು ನಗರ ಸಂಚಾರ ಕೈಗೊಳ್ಳಲಿದೆ. ಕರಗವು ನಿಗದಿ ಪಡಿಸಿದ ಮಾರ್ಗಗಳಲ್ಲಿ ಸಂಚರಿಸಲಿದ್ದು, ಬೆಳಿಗ್ಗೆ ಸ್ವಸ್ಥಾನ ಸೇರಲಿದೆ.
ಕರಗ ಉತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿವೆ. ಚಿಕ್ಕಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯವನ್ನು ಕರಗದ ಅಂಗವಾಗಿ ವಿಶೇಷ ಅಲಂಕಾರ, ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿದೆ.
ನಗರದ ವಿವಿದೆಡೆಗಳಲ್ಲಿ ತಮಿಳುನಾಡಿನ ಕಲಾವಿದರು ತಯಾರಿಸಿರುವ ವಿವಿಧ ದೇವತೆಗಳ ಆಕರ್ಷಕ ಬೃಹತ್ ವಿದ್ಯುತ್ ದೀಪಾಲಂಕೃತ ಕಟೌಟ್‌ಗಳು ಕಣ್ಮನ ಸೆಳೆಯುತ್ತಿವೆ. ಇದರೊಂದಿಗೆ ಕರಗ ಸ್ವಾಗತಿಸಲು ನಗರದಲ್ಲಿ ಸಿದ್ದತೆಗಳು ಭರದಿಂದ ಸಾಗಿವೆ.
ವಿವಿದೆಡೆ ಅನ್ನಸಂತರ್ಪಣೆ ಪೂಜಾ ಕಾರ್ಯಗಕ್ರಮಗಳು, ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ.
ಕರಗ ಮಹೋತ್ಸವದ ಅಂಗವಾಗಿ ನಗರದ ದೇವಾಲಯಗಳ ವಿವಿಧ ದೇವತಾ ಮೂರ್ತಿಗಳ ಉತ್ಸವಗಳು ಸಂಚರಿಸಲಿವೆ.

