
ದೊಡ್ಡಬಳ್ಳಾಪುರ: ರತ್ನಮ್ಮಜಯರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕೊನಘಟ್ಟ ಕ್ಷೇತ್ರ ಸದಸ್ಯ ನಾರಾಯಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. (ವಿಡಿಯೋ ನೋಡಿ)
ಇಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನಾರಾಯಣಗೌಡರು ಬಿಟ್ಟು ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ನಾರಾಯಣಗೌಡರನ್ನು ಅವಿರೋಧವಾಗಿ ಆಯ್ಕೆಯಾದರೆಂದು ಘೋಷಿಸಿದರು.
22 ಮಂದಿ ಸದಸ್ಯ ಬಲದ ತಾಲೂಕು ಪಂಚಾಯಿತಿ ಆಡಳಿತಾವಧಿ ಮೇ ತಿಂಗಳ ಕೊನೆಗೆ ಅಂತ್ಯಗೊಳ್ಳಲಿದೆ. ಐದು ವರ್ಷದ ಅವಧಿಯಲ್ಲಿ ಈಗಾಗಲೇ ಶ್ರೀವತ್ಸ, ಡಿ.ಸಿ.ಶಶಿಧರ್, ರತ್ನಮ್ಮಜಯರಾಂ ಅಧ್ಯಕ್ಷರಾಗಿದ್ದಾರೆ.
16 ಮಂದಿ ಕಾಂಗ್ರೆಸ್ ಸದಸ್ಯರಿರುವ ಕಾರಣ ಪೂರ್ವ ನಿರ್ಣಯದಂತೆ ಕೊನಘಟ್ಟ ಕ್ಷೇತ್ರ ನಾರಾಯಣಗೌಡ ಅಧ್ಯಕ್ಷರಾಗುವುದು ಖಚಿತ ಎನ್ನಲಾಗಿತ್ತು ಅಂದರಂತೆ ಆಯ್ಕೆ ನಡೆದಿದೆ.
ಜೆಡಿಎಸ್ ಪಕ್ಷದ ಮೆಳೆಕೋಟೆ ಕ್ಷೇತ್ರದ ಸದಸ್ಯ ಕಣಿವೇಪುರ ಸುನೀಲ್ ಕುಮಾರ್ ಸಹ ಸ್ಪರ್ಧೆಯಲ್ಲಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತಾದರು, ಅಧಿಕಾರಾವಧಿ ಕೇವಲ 6 ತಿಂಗಳು ಉಳಿದೆ ಎಂಬ ಕಾರಣ ಸ್ಪರ್ಧೆಗಿಳಿದಿರಲಿಲ್ಲ ಎಂದು ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ನೂತನವಾಗಿ ಆಯ್ಕೆಯಾದ ನಾರಾಯಣಗೌಡರನ್ನು ಶಾಸಕ ಟಿ.ವೆಂಕಟರಮಣಯ್ಯ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ತಾಪಂ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

