
ಬೆಂ.ಗ್ರಾ.ಜಿಲ್ಲೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರಿಗಾಗಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ಖಾಲಿಯಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗಾಗಿ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಕಲಚೇತನರ ಸಮಸ್ಯೆ ಹಾಗೂ ಅಗತ್ಯಗಳನ್ನು ಅರಿತು, ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ವಿಕಲಚೇತನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ವಿ.ಆರ್.ಡಬ್ಲ್ಯೂ. ಅನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಬೇಕಾಗಿದೆ.
ದೇವನಹಳ್ಳಿ ತಾಲ್ಲೂಕಿನ ಮಂಡಿಬೆಲೆ, ವಿಶ್ವನಾಥಪುರ, ಕುಂದಾಣ, ಆಲೂರು ದುದ್ದನಹಳ್ಳಿ, ಕೊಯಿರಾ, ಜಾಲಿಗೆ ಗ್ರಾಮ ಪಂಚಾಯಿತಿಗಳಲ್ಲಿ ನೇಮಕಾತಿ ನಡೆಯಲಿದ್ದು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಲು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸವಿರುವ ಆಸಕ್ತ ವಿಕಲಚೇತನರು 2021ರ ಜನವರಿ 21 ರೊಳಗೆ ಅರ್ಜಿ ಸಲ್ಲಿಸುವುದು.
ಗೌರವಧನ ಹುದ್ದೆಗೆ ಇರಬೇಕಾದ ಅರ್ಹತೆಗಳು: ಗ್ರಾಮೀಣ ಪುನರ್ವಸತಿ ಕಾರ್ಯಕರ್ತ(VRW) ಗೌರವಧನ ಮಾಹೆಯಾನ ರೂ. 6,000/-, ಶೇಕಡಾ 40 ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರಬೇಕು. (ಅಂಗವಿಕಲರ ಗುರುತಿನ ಚೀಟಿ (ಯು.ಡಿ.ಐ.ಡಿ) ಝರಾಕ್ಸ್ ಪ್ರತಿ ಲಗತ್ತಿಸಬೇಕು.), ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರದವರಿಗೆ ಆದ್ಯತೆ. ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾದವರು ಸಿಗದೆ ಇದ್ದ ಸಂದರ್ಭದಲ್ಲಿ ಅನುತ್ತೀರ್ಣರಾದವರನ್ನು ಪರಿಗಣಿಸಲಾಗುವುದು. 18-45 ವಯೋಮಿತಿಯಲ್ಲಿದ್ದು, ಆರೋಗ್ಯವಂತರಾಗಿರಬೇಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ/ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. ಮಾಹೆಯಾನ ರೂ. 5850 ಗೌರವಧನ ನೀಡಲಾಗುವುದು ಹಾಗೂ ಪ್ರವಾಸ, ಲೇಖನ ಸಾಮಗ್ರಿ ಹಾಗೂ ಆಡಳಿತ ವೆಚ್ಚಕ್ಕಾಗಿ ರೂ. 150-00 ನೀಡಲಾಗುವುದು, ಗೌರವಧನದ ನೇಮಕಾತಿಯು ಒಂದು ವರ್ಷದ ನಂತರ ಪುನರ್ ಪರಿಶೀಲನೆಗೆ ಒಳಪಟ್ಟಿರುತ್ತದೆ. ಪುನರ್ ಪರಿಶೀಲನೆಯಲ್ಲಿ ಕೆಲಸ ಕಾರ್ಯಗಳ ನಿರ್ವಹಣೆ, ಅಂಗವಿಕಲರೊಂದಿಗೆ ಸಂಬಂಧ ವಿವಿಧ ಇಲಾಖೆಗಳೊಂದಿಗೆ/ಸ್ವಯಂ ಸೇವಾ ಸಂಸ್ಥೆ/ ಸಮುದಾಯದೊಂದಿಗೆ ವಿಕಲಚೇತನ ಅಭಿವೃದ್ಧಿಗಾಗಿ ಇಟ್ಟುಕೊಂಡಿರುವ ಸಂಬಂಧಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಸದರಿ ಹುದ್ದೆಯು ಗೌರವಧನದ ಆಧಾರದ ಮೇಲೆ ಇರುವುದರಿಂದ ಇವರನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆದು ಹಾಕಬಹುದಾಗಿದೆ/ ಬಿಡುಗಡೆ ಮಾಡಬಹುದಾಗಿದೆ. ಗೌರವಧನ ಆಧಾರದ ಮೇಲೆ ಕೆಲಸ ನಿರ್ವಹಿಸುವುದರಿಂದ ಖಾಯಂಗೊಳಿಸಲು ಕೋರಲು ಅವಕಾಶವಿರುವುದಿಲ್ಲ. ಭಾಗಶ: ದೃಷ್ಟಿದೋಷವುಳ್ಳವರು, ಭಾಗಶ: ಶ್ರವಣದೋಷವುಳ್ಳವರು, ಹಾಗೂ ಇತರೆ ಮೈಲ್ಡ್ ಮತ್ತು ಮಾಡರೇಟ್ ವಿಕಲಚೇತನರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಸಂಬಂಧಪಟ್ಟ ಪಂಚಾಯಿತಿ ವಾಪ್ತಿಯಲ್ಲಿ ವಾಸವಿರುವ ಬಗ್ಗೆ ತಹಸೀಲ್ದಾರರಿಂದ ವಾಸ ಸ್ಥಳ ದೃಢೀಕರಣ ಪತ್ರ ಲಗತ್ತಿಸುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಠಡಿ ಸಂಖ್ಯೆ: 03, ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂ.ಸಂ: 080-29787442 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿ.

