
ಬೆಂ.ಗ್ರಾ.ಜಿಲ್ಲೆ: ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷರು ಡಾ.ಆಂಥೋಣಿ ಸೆಬಾಸ್ಟಿಯನ್ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರ ಸಹಯೋಗದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿಂದು ನಡೆದ “ಆರ್.ಟಿ.ಇ ಪೋಕ್ಸೋ-2012, ಬಾಲ ನ್ಯಾಯ ಕಾಯ್ದೆ ಅನುಷ್ಠಾನದ ಬಗ್ಗೆ ವಿವಿಧ ಇಲಾಖೆಗಳ ಭಾಗೀದಾರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆ” ಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪ್ರಕರಣಗಳು ಕಡಿಮೆಯಾಗಬೇಕು ಎಂದರಲ್ಲದೆ, ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಹಾಗೂ ನಿರ್ಗತಿಕ ಮಕ್ಕಳಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯಾದ ಆರ್.ನಟೇಶ್ ಅವರು, ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಪರಿಸರ ನಿರ್ಮಾಣ ಮಾಡಬೇಕು, ಹಿಂದಿನ ಕಾಲದಂತೆ ಶಿಕ್ಷಣ ನೀಡವಲ್ಲಿ ಗುರುಕುಲ ಪದ್ದತಿಯ ಶಿಕ್ಷಣ ನೀಡಲು ಈಗ ಸಾಧ್ಯವಿಲ್ಲವಾದರೂ ಸರ್ಕಾರದ ಮಾರ್ಗಸೂಚನೆ ಅನ್ವಯ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿರುವುದರಿಂದ ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ ಸರ್ಕಾರದಿಂದ ಸೌಲಭ್ಯ ಪಡೆದು ಮಕ್ಕಳ ರಕ್ಷಣೆ, ಆರೋಗ್ಯ, ಯೋಗಕ್ಷೇಮ ಹಾಗೂ ಶಿಕ್ಷಣವನ್ನು ನೀಡಬೇಕು ಎಂದರಲ್ಲದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ ಬಾಲ್ಯ ವಿವಾಹವು ಮೊದಲು ಎರಡು ವರ್ಷಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಯಾವುದಾದರೂ ಪೊಲೀಸ್ ಠಾಣೆಯವರು ಸಹಕಾರ ನೀಡದಿದ್ದರೆ, ಅಂತಹ ಠಾಣೆಗಳ ಹೆಸರುಗಳನ್ನು ನೀಡಿದರೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು. ಮಕ್ಕಳ ಗ್ರಾಮ ಸಭೆಯನ್ನು ಕಡ್ಡಾಯವಾಗಿ ಮಾಡಬೇಕು ಅಲ್ಲದೇ ಸೌಲಭ್ಯವಿರುವ ಕಡೆಗಳಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ತೆರೆಯಬೇಕು ಎಂದರು.
ಮಕ್ಕಳು ತಮ್ಮ ಹಕ್ಕುಗಳನ್ನು ನಿವೇದನೆ ಮಾಡಿಕೊಳ್ಳಲು ಮನೆ, ಬೀದಿ, ಶಾಲೆಗಳಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಅದನ್ನು ಮುಕ್ತವಾಗಿ ಹೇಳಿಕೊಳ್ಳಲು ಧ್ವನಿ ಪೆಟ್ಟಿಗೆಗಳನ್ನಿರಿಸುವ ವ್ಯವಸ್ಥೆ ಮಾಡಬೇಕು ಎಂದರಲ್ಲದೆ, ಮಕ್ಕಳ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು ಹಾಗೂ ವಾರದ ಸಭೆ ಮಾಡುವ ಮೂಲಕ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಹೆಚ್ಚಿಸಬೇಕು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಡಿ.ಶಂಕರಪ್ಪ ಅವರು ಮಾತನಾಡಿ ನಿಖರವಾದ ಮಾಹಿತಿ ಇಲ್ಲದೇ, ಸಭೆಗೆ ಹಾಜರಾಗುವುದು ತಪ್ಪು. ಬಾಲ ಕಾರ್ಮಿಕ ಮಕ್ಕಳನ್ನು ಸರಿಯಾಗಿ ಗುರುತಿಸಿ, ಅವರಿಗೆ ಶಿಕ್ಷಣ ಕೊಡಿಸುವ ಕೆಲಸವಾಗಬೇಕು ಎಂದರು. ಆಯಾ ತಾಲ್ಲೂಕುಗಳಲ್ಲಿರುವ ಮಕ್ಕಳನ್ನು ಬಾಲ ಕಾರ್ಮಿಕ ಪದ್ದತಿಯಿಂದ ಮುಕ್ತಿ ಕೊಡಿಸಬೇಕು ಹಾಗೂ ಅಧಿಕಾರಿಗಳು ಸಭೆಗೆ ಬರುವ ಮುನ್ನ ಸಂಕ್ಷಿಪ್ತ ಮಾಹಿತಿಯೊಂದಿಗೆ ಬರಬೇಕು ಎಂದು ತಿಳಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಹೇಮಾವತಿ.ಎನ್ ಅವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2020-21ನೇ ಸಾಲಿನ ಬಾಲ್ಯವಿವಾಹ, ಬಾಲ ಕಾರ್ಮಿಕ, ನಿರಾಶ್ರಿತ ಮಕ್ಕಳು, ವಲಸೆ ಮಕ್ಕಳು, ನಿರ್ಗತಿಕ ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳು, ಶಿಕ್ಷಣ ವಂಚಿತ ಮಕ್ಕಳಿಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಜಯಶ್ರೀ, ಪರಶುರಾಮ್.ಎಂ.ಎಲ್., ಹೆಚ್. ಸಿ.ರಾಘವೇಂದ್ರ, ಭಾರತಿ, ಅಶೋಕ್.ಜಿ.ಯರಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪುಷ್ಪಾ.ಜಿ.ರಾಯರ್ ಮತ್ತಿತ್ತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

