
ದೊಡ್ಡಬಳ್ಳಾಪುರ: ತಾಲೂಕಿನ ನಗರ,ಗ್ರಾಮಾಂತರ ಪ್ರದೇಶದಲ್ಲಿ ಗುರುವಾರ ಮಕರ ಸಂಕ್ರಾಂತಿ ಹಬ್ಬದ ಆಚರಣೆ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಅಪ್ಪಯ್ಯಸ್ವಾಮಿ, ನಗರೇಶ್ವರಸ್ವಾಮಿ, ಮುತ್ತ್ಯಾಲಮ್ಮ, ಕಾಳಮ್ಮದೇವಿ, ಅಭಯ ಚೌಡೇಶ್ವರಿ, ಅಂಜನೇಯಸ್ವಾಮಿ, ವೆಂಕಟರಮಣಸ್ವಾಮಿ ಮುಂತಾದ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.
ಸಂಕ್ರಾಂತಿ ಹಬ್ಬ ದಿನವು ಸಹ ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಅವರೆ ಕಾಯಿ, ಕಡಲೆ ಕಾಯಿ, ಕಬ್ಬು, ಗೆಣಸು ಮುಂತಾದ ಪದಾರ್ಥಗಳ ಮಾರಾಟ ಸಹ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರೈತರು ಮುಂಜಾನೆಯಿಂದಲೇ ರಾಸುಗಳಿಗೆ ಮೈ ತೊಳೆದು, ಕೊಂಬುಗಳಿಗೆ ಬಣ್ಣಗಳನ್ನು ಬಳಿದು ಅಲಂಕಾರ ಮಾಡುತ್ತಿದ್ದರು. ತಾಲೂಕಿನ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಗಳು ನಡೆದವು.
ಸಂಜೆಯ ಕಾರ್ಯಕ್ರಮಗಳು: ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮೀಣ ಪ್ರದೇಶದಲ್ಲಿ ಕಾಟಿಮರಾಯನ ಹಬ್ಬದ ಆಚರಣೆ ನಡೆದಿದೆ. ರಾಸುಗಳಿಗೆ ಮೈ ತೊಳೆದು, ಕೊಂಬುಗಳಿಗೆ ಬಣ್ಣಗಳನ್ನು ಬಳಿದು, ಬಗೆ ಬಗೆಯ ಅಲಂಕಾರದಿಂದ ಕೂಡಿದ ಗೌನುಗಳನ್ನು ಹೊದಿಸಿ ಕೊರಳಿಗೆ ಗೆಜ್ಜೆ ಸಾರಗಳನ್ನು ಹೂವಿನ ಹಾರಗಳನ್ನು ಹಾಕಿ ವಾದ್ಯಗಳೊಂದಿಗೆ ಮರೆವಣಿಗೆ ಮಾಡಿದರು.
ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ, ಕಿಚ್ಚು ಹಾಯಿಸುವ ಅಚರಣೆಗಳು ಎಲ್ಲೆಡೆ ಕಂಡು ಬಂದವು.ರಾಸುಗಳಿಗೆ ಅಲಂಕಾರ ಮಾಡಿಕೊಂಡು ಮೆರವಣಿಗೆಯಲ್ಲಿ ಊರ ಹೊರಗಿರುವ ಕಾಟಿಮರಾಯನ ಗೋಪುರ ಬಳಿಗೆ ಕರೆ ತಂದು ಪೂಜೆ ಸಲ್ಲಿಸಿದರು.
ಮಣ್ಣಿನಿಂದ ಮಾಡಲ್ಪಟ್ಟ ಎತ್ತರ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣಿನ ಪಟ್ಟೆಗಳನ್ನು ಬಳಿದು, ಹೂವು, ಮಾವು ಮತ್ತು ಬಾಳೆಯಿಂದ ಅಲಂಕಾರ ಮಾಡಿದ್ದರು.ಕೆಲವು ಗ್ರಾಮಗಳಲ್ಲಿ ಅಂಚಿ ಕಡ್ಡಿಗಳನ್ನು ಪೋಣಿಸಿರುವುದು ಸಹ ಕಂಡು ಬಂತು. ಪ್ರತಿ ಮನೆಯಿಂದ ಅಕ್ಕಿ, ಕಾಳು, ಬೆಲ್ಲ ಸಂಗ್ರಹಿಸಿ ಅವುಗಳನ್ನು ಬೇಯಿಸಿ ಪ್ರಸಾದವನ್ನು ರಾಸುಗಳಿಗೆ ನೀಡುತ್ತಿದ್ದರು.
ಕಾಟಿಮರಾಯನ ಗುಡಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆ ನಡೆದ ನಂತರ ಊರಿನ ಕಡೆಗೆ ರಾಸುಗಳನ್ನು ಓಡಿಸಿಕೊಂಡು ಬಂದು ಕಿಚ್ಚು ಹಾಯಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

