
ಬೆಂಗಳೂರು: ಇಂದಿನಿಂದ ರಾಜ್ಯದಾದ್ಯಂತ ಕೋವಿಡ್ ಲಸಿಕೆಯ ಎರಡನೇ ಡೋಸ್ ವಿತರಣೆ ಪ್ರಾರಂಭವಾಗಲಿದೆ.
ಜ.16ರಂದು ರಾಜ್ಯದ 243 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡಲಾಗಿತ್ತು. ಅಂದು 13 ಸಾವಿರ ಮಂದಿ ಹಾಜರಾಗಿ, ಲಸಿಕೆ ಪಡೆದುಕೊಂಡಿದ್ದರು.
ಮೊದಲ ಡೋಸ್ ಪಡೆದ 28ನೇ ದಿನಕ್ಕೆ ಎರಡನೇ ಡೋಸ್ ನೀಡುವುದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಅದರ ಅನುಸಾರ ಫೆ.13ರಿಂದ ಎರಡನೇ ಡೋಸ್ ನೀಡಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರವು ಎರಡನೇ ಡೋಸ್ ವಿತರಣೆಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿರಲಿಲ್ಲ. ರಾಜ್ಯ ಸರ್ಕಾರಗಳ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಶನಿವಾರ ಸಭೆ ನಡೆಸಿದ ಕೇಂದ್ರ ಸರ್ಕಾರದ ಅಧಿಕಾರಿಗಳು, ಎರಡನೇ ಡೋಸ್ ನೀಡಲು ಅನುಮತಿ ನೀಡಿದ್ದರು. ಹೀಗಾಗಿ ಸೋಮವಾರದಿಂದ ಎರಡನೇ ಡೋಸ್ ವಿತರಣೆ ನಡೆಯಲಿದೆ.
ಎರಡನೇ ಡೋಸ್ ಲಸಿಕೆಗೆ 8 ರಿಂದ 12 ವಾರಗಳ ಅಂತರವಿದ್ದಲ್ಲಿ ಲಸಿಕೆಯು ಉತ್ತಮ ಪರಿಣಾಮ ಬೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈ ಹಿಂದಿನ ಮಾರ್ಗಸೂಚಿಯಂತೆ 28 ದಿನಗಳ ಬಳಿಕವೇ ಲಸಿಕೆ ನೀಡಬೇಕು ಎಂದು ಸೂಚಿಸಿದೆ. ಹೀಗಾಗಿ, ಎರಡನೇ ಡೋಸ್ ಲಸಿಕೆ ವಿತರಣೆ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

