
ದೊಡ್ಡಬಳ್ಳಾಪುರ: ಮೇ.8 ರಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಜೆಡಿಎಸ್ (JDS) ಪಕ್ಷದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ.
ಬೆಂಗಳೂರಿನ ನಿಖಿಲ್ ಕುಮಾರಸ್ವಾಮಿ ಅವರ ಸ್ವಗೃಹಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ್, ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್ ಗೌಡ ಸೇರಿದಂತೆ ಅನೇಕ ಹಿರಿಯ ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದರು.
ಈ ವೇಳೆ ಕಾರ್ಯಕ್ರಮದ ಆಯೋಜನೆ, ಬೈಕ್ ರ‍್ಯಾಲಿಯಲ್ಲಿ ವಿಳಂಭ ಮಾಡದೆ, ವೇದಿಕೆಗೆ ಹೆಚ್ಚಿನ ಸಮಯ ಮೀಸಲಿಡುವಂತೆ ನಿಖಿಲ್ ಕುಮಾರಸ್ವಾಮಿ ಸೂಚನೆ ನೀಡಿದರು.
20 ಸಾವಿರ ಮಂದಿ ಸೇರುವ ನಿರೀಕ್ಷೆ
ಮೇ 8 ರಂದು ಭಗತ್ ಸಿಂಗ್ ಕ್ರೀಡಾಂಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಸುಮಾರು 20 ಸಾವಿರ ಸೇರುವ ನಿರೀಕ್ಷೆ ಇದ್ದು, ಇದಕ್ಕಾಗಿ ಮಂಗಳವಾರ ವೇದಿಕೆ ಸಿದ್ದತೆಗೆ ಭೂಮಿ ಪೂಜೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಪಕ್ಷದ ಎಲ್ಲಾ ಹಿರಿಯ ಹಾಗೂ ಯುವ ಮುಖಂಡರನ್ನು ಆಹ್ವಾನಿಸಲಾಗಿದೆ. ಈ ಸಮಾವೇಶ ಸದ್ಯದಲ್ಲೇ ಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈ ಸಮಾವೇಶ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ ಎಂಬ ಉದ್ದೇಶ ಜೆಡಿಎಸ್ ಮುಖಂಡರದ್ದಾಗಿದೆ.
ಶೃಂಗೇರಿ ಮತ ಮರು ಎಣಿಕೆ ಪ್ರಕರಣ: ರಾಜ್ಯಪಾಲರ ಮೊರೆ ಹೋದ ಬಿಜೆಪಿ

ಬೆಂಗಳೂರು: ಶೃಂಗೇರಿ (Sringeri) ಶಾಸಕ (MLA) ಡಿ.ಎನ್.ಜೀವರಾಜ್ (D.N. Jeevaraj) ಅವರಿಗೆ ಸ್ಪೀಕರ್ ಯು.ಟಿ.ಖಾದರ್ (U.T. Khader) ಪ್ರಮಾಣವಚನ ಬೋಧಿಸಲು ತಡ ಮಾಡುತ್ತಿದ್ದಾರೆ. ಆದ್ದರಿಂದ ರಾಜ್ಯಪಾಲರೇ (Governor) ನೇರವಾಗಿ ಪ್ರಮಾಣವಚನ ಬೋಧಿಸಲು ಕೋರಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.
ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ ಶಾಸಕರು ಎಂಬ ಫಲಿತಾಂಶ ಬಂದಿದೆ. ಚುನಾವಣಾ ಆಯೋಗದಿಂದ ಎಲ್ಲ ಶಾಸಕರಿಗೆ ಪ್ರಮಾಣ ಪತ್ರ ನೀಡುವಂತೆ ಇವರಿಗೂ ಪ್ರಮಾಣಪತ್ರ ಸಿಕ್ಕಿದೆ.
ರಾಜ್ಯ ಸರ್ಕಾರದ ರಾಜ್ಯಪತ್ರದ ಆದೇಶವೂ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಶಾಸಕರು ಇದೇ ರೀತಿ ಶಾಸಕರು ಎನಿಸಿಕೊಳ್ಳುತ್ತಾರೆ. ಈ ಕುರಿತು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಫೋನ್ ಕರೆ ಮಾಡಿ ಮಾತಾಡಲು ಯತ್ನಿಸಿದರೆ ಬೇಕೆಂದೇ ಕರೆ ಸ್ವೀಕರಿಸಲಿಲ್ಲ.
ಈಗ ಭೇಟಿ ಮಾಡಿದರೆ ನನಗೆ ಕಾನೂನಿನ ಬೋಧನೆ ಮಾಡುತ್ತಿದ್ದಾರೆ. ಸ್ಪೀಕರ್ ಕೂಡ ಇದೇ ರೀತಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗೆ ಆಯ್ಕೆಯಾಗುವಾಗ ಅವರೇನೂ ಕೋರ್ಟ್‌ಗೆ ಹೋಗಿರಲಿಲ್ಲ. ಯಾವುದೇ ಶಾಸಕರ ವಿರುದ್ಧ ಕೋರ್ಟ್ ಗೆ ಹೋಗಲು 45 ದಿನಗಳ ಕಾಲಾವಕಾಶವಿದ್ದರೂ ಪ್ರಮಾಣವಚನಕ್ಕೆ ಅದು ಅಡ್ಡಿಯಾಗುವುದಿಲ್ಲ. ಆದರೆ ಸ್ಪೀಕರ್ ಯು.ಟಿ.ಖಾದರ್ ಮಾತ್ರ ಪ್ರಮಾಣವಚನಕ್ಕೆ ಅವಕಾಶ ಮಾಡಿಕೊಡದೆ ಹೊಸ ಸಂಪ್ರದಾಯ ಆರಂಭಿಸಿದ್ದಾರೆ ಎಂದು ದೂರಿದರು.
ಜೀವರಾಜ್ ಅವರ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಕಾಂಗ್ರೆಸ್ ನವರೇ ದೊಡ್ಡ ಡಕಾಯಿತಿ ಮಾಡುತ್ತಾರೆ. ಮತ ಎಣಿಕೆ ವೇಳೆ ಚುನಾವಣಾಧಿಕಾರಿಗೆ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಕರೆ ಮಾಡಿ ಒತ್ತಡ ಹೇರಿದ್ದಾರೆಯೇ ಎಂದು ಸಿಬಿಐ ತನಿಖೆ ಆಗಬೇಕಿದೆ.
ಫಲಿತಾಂಶವನ್ನು ಕೋರ್ಟ್ ಗೆ ಸಲ್ಲಿಸಿ ಎಂದು ಎಲ್ಲೂ ಹೇಳಿಲ್ಲ. ಫಲಿತಾಂಶವನ್ನು ಕೂಡಲೇ ಪ್ರಕಟಿಸಿ ಎಂಬ ಸೂಚನೆ ಇದೆ. ಇಲ್ಲಿ ಸ್ಪೀಕರ್ ಭೇಟಿಯಾಗಿ ಕೇಳಿದರೆ, ನಾಳೆ ಬಾ ನೋಡೋಣ, ಕಾನೂನು ಸಲಹೆ ಪಡೆಯಬೇಕಿದೆ ಎನ್ನುತ್ತಾರೆ. ಹಾಗಿದ್ದರೆ 224 ಶಾಸಕರ ಬಗ್ಗೆಯೂ ಕಾನೂನು ಸಲಹೆ ಪಡೆಯಬೇಕಿತ್ತು ಎಂದರು.
ಸಂವಿಧಾನದ ವಿಧಿ 188 ಪ್ರಕಾರ, ಪ್ರಮಾಣವಚನವನ್ನು ರಾಜ್ಯಪಾಲರು ಬೋಧಿಸುತ್ತಾರೆ. ಸ್ಪೀಕರ್ ಇಲ್ಲವಾದರೆ ಬೇರೆಯವರ ಹೆಸರು ಸೂಚಿಸುವ ಅಧಿಕಾರ ರಾಜ್ಯಪಾಲರಿಗಿದೆ. ಆದ್ದರಿಂದ ಸ್ಪೀಕರ್ ಬದಲು ನೀವೇ ಪ್ರಮಾಣವಚನ ಬೋಧಿಸಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಹೀಗೆ ಮಾಡಿದಾಗ ಇಬ್ಬರು ಬಿಜೆಪಿ ಶಾಸಕರು ರಾಜ್ಯಪಾಲರಿಗೆ ಕೋರಿದ್ದರು. ಅದೇ ರೀತಿ ನಾವು ಕೂಡ ಕೋರಿದ್ದೇವೆ. ಈ ಪ್ರಕ್ರಿಯೆ ನಡೆಯದೇ ಇದ್ದಲ್ಲಿ ಸ್ಪೀಕರ್ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಕೆಳಗಿನ ಅಧಿಕಾರಿಗಳು ಪೇಮೆಂಟ್ ಗಿರಾಕಿಗಳು ಅಂದಮೇಲೆ ಅವರೇ ಟ್ಯಾಂಪರ್ ಮಾಡಲು ಹೇಗೆ ಸಾಧ್ಯ? ಜೀವರಾಜ್ ಸೋತು ಎಂಟು ವರ್ಷವಾಗಿರುವಾಗ ಅವರ ಮಾತನ್ನು ಅಧಿಕಾರಿಗಳು ಕೇಳಲು ಸಾಧ್ಯವೇ? ಅಧಿಕಾರಿಗಳು ಮುಖ್ಯಮಂತ್ರಿಯ ಮಾತನ್ನು ಕೇಳುತ್ತಾರೆ.
ಶೃಂಗೇರಿ ಕ್ಷೇತ್ರ ವೋಟ್ ಚೋರಿಗೆ ಉದಾಹರಣೆಯಾಗಿದ್ದು, ಇಡೀ ಸರ್ಕಾರ ವಜಾ ಮಾಡಬೇಕಿದೆ. ಎಲ್ಲ ಕಡೆ ಮತಗಳ್ಳತನ ಆಗುತ್ತಿದೆ ಎಂದರೆ ಸರ್ಕಾರದ ಎಲ್ಲ ಅಧಿಕಾರಿಗಳು ಡಕಾಯಿತರು ಎನ್ನಬೇಕಾಗುತ್ತದೆ. ಎಲ್ಲ ಕಡೆ ಸಿಸಿಟಿವಿ ಕ್ಯಾಮರಾ ಇರುವಾಗ ಕಳ್ಳತನವಾಗಲು ಸಾಧ್ಯವಿಲ್ಲ ಎಂದರು.
ತಮಿಳುನಾಡಿನಲ್ಲಿ ಕಾಂಗ್ರೆಸ್ ಊಟ ಸಿಗುವ ಕಡೆ ಓಡುತ್ತಿದೆ. ಈಗ ನಟ ವಿಜಯ್ ಬಳಿ ಹೋಗಿದ್ದಾರೆ. ಡಿಎಂಕೆಗೆ ಕಾಂಗ್ರೆಸ್ ಕೈ ಕೊಡುವ ಲಕ್ಷಣ ಕಂಡುಬಂದಿದೆ. ಕಾಂಗ್ರೆಸ್ ಗೆ ನ್ಯಾಯ ನೀತಿ ಇಲ್ಲದೆ ಗೆದ್ದ ಎತ್ತಿನ ಬಾಲ ಹಿಡಿಯುತ್ತಿದ್ದಾರೆ. ಹಿಂದುತ್ವದ ವಿರುದ್ಧ ಮಾತಾಡಿದ ಉದಯ್ ಹಾಗೂ ಸ್ಟಾಲಿನ್ ಸೋತಿದ್ದಾರೆ. ಹಿಂದುಗಳನ್ನು ಕೆಣಕಿದರೆ ಏನಾಗುತ್ತದೆ ಎಂದು ಇದರಿಂದ ತಿಳಿಯುತ್ತದೆ ಎಂದರು.

