
ಪ್ದೊಡ್ಡಬಳ್ಳಾಪುರ: ಜೆಡಿಎಸ್ (JDS) ಪಕ್ಷದ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕವೇ ಮೇ.8 ರಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಜೆಡಿಎಸ್ (JDS) ರಜತ ಮಹೋತ್ಸವ ಸಮಾರಂಭ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಮಂಜುನಾಥ್ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿ.ಮುನೇಗೌಡ ಅವರು ಪಕ್ಷ ಸಂಘಟನೆಯಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರನ್ನು ವಿಶ್ವಾಸಕ್ಕೆ ಪಡೆದೇ ಕಾರ್ಯಕ್ರಮ ನಡೆಸಲಾಗುತ್ತಿದೆ.
ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ, ಪದಾಧಿಕಾರಿಗಳ ಆಯ್ಕೆ ಸಮಯದಲ್ಲಿ ಎಲ್ಲಾ ಪಕ್ಷಗಳಲ್ಲಿ ಇರುವಂತೆಯೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಒಂದಿಷ್ಟು ಅಸಮಧಾನಗಳು ಇವೆ.
ಮೇ. 8 ರಂದು ನಡೆಯುವ 25ರ ಸಂಭ್ರಮಾಚರಣೆಗೆ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಲಾಗುವುದು.
ಈಗಾಗಲೇ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹರೀಶ್ ಗೌಡ ಅವರು ಪಕ್ಷದ ಎಲ್ಲಾ ಹಿರಿಯ ಮುಖಂಡರ ಮನೆಗಳಿಗು ಭೇಟಿ ನೀಡಿ ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಗೌಡ ಮಾತನಾಡಿ, ಮೇ 8 ರಂದು ಭಗತ್ ಸಿಂಗ್ ಕ್ರೀಡಾಂಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಸುಮಾರು 20 ಸಾವಿರ ಸೇರುವ ನಿರೀಕ್ಷೆ ಇದ್ದು, ಇದಕ್ಕಾಗಿ ಮಂಗಳವಾರ ವೇದಿಕೆ ಸಿದ್ದತೆಗೆ ಭೂಮಿ ಪೂಜೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಪಕ್ಷದ ಎಲ್ಲಾ ಹಿರಿಯ ಹಾಗೂ ಯುವ ಮುಖಂಡರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನಿಸಲಾಗಿದೆ. ಸದ್ಯದಲ್ಲೇ ಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈ ಸಮಾವೇಶ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಟಿ.ಎನ್.ಪ್ರಭುದೇವ್, ಡಾ.ವಿಜಯಕುಮಾರ್, ಆನಂದ್, ಜಿ. ಸತ್ಯನಾರಾಯಣ್, ಅಶ್ವತ್ಥ್ನಾರಾಯಣಗೌಡ, ನಟರಾಜ್, ವಿ.ಆಂಜನೇಗೌಡ, ಆರ್.ಕೆಂಪರಾಜ್, ತಳವಾರ್ ನಾಗರಾಜ್, ನಾರಾಯಣಪ್ಪ, ಗೋವಿಂದರಾಜ್, ನರಸಿಂಹಗೌಡ, ಪ್ರವೀಣ್, ಅಶ್ವತ್ಥ್ ಇದ್ದರು.
ಇದಕ್ಕೂ ಮೊದಲು ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಜನರೊಂದಿಗೆ ಜನತಾದಳ ಬೃಹತ್ ಸಮಾವೇಶದ ವೇದಿಕೆ ನಿರ್ಮಾಣದ ಪೂಜೆಯನ್ನು ಮುಖಂಡರು ನೆರವೇರಿಸಿದರು.

