
ದೊಡ್ಡಬಳ್ಳಾಪುರ: ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ವಿನಾಕಾರಣ ವಿಳಂಬ ಮಾಡುವುದು, ಸಕಾಲದಲ್ಲಿ ಬರುವ ಅರ್ಜಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವುದು ಸಾಬೀತಾದರೆ ಶಿಕ್ಷೆ ಆಗುವುದು ಖಚಿತ ಎಂದು ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿವೈಎಸ್‌ಪಿ ಗೋಪಾಲ್ ಡಿ.ಜೋಗಿನ ಹೇಳಿದರು.
ಅವರು ಬುಧವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಸಿಬಿ ವತಿಯಿಂದ ನಡೆದ ಸಾರ್ವಜನಿಕರ ಕುಂದು-ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಲಾಕ್‌ಡೌನ್ ನಂತರ ಮತ್ತೆ ಸಾರ್ವಜನಿಕರ ಕುಂದು-ಕೊರತೆ ಸಭೆಗಳನ್ನು ಎಸಿಬಿ ವತಿಯಿಂದ ಪ್ರಾರಂಭ ಮಾಡಲಾಗಿದೆ. ಆದರೆ ಈ ಬಗ್ಗೆ ಸೂಕ್ತ ಪ್ರಚಾರದ ಕೊರತೆಯಿಂದಾಗಿ ಸಭೆಗಳಿಗೆ ಸಾರ್ವಜನಿಕರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಸಭೆಯಲ್ಲಿ ತಾಲ್ಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲೇ ಬೇಕು. ಸಾರ್ವಜನಿಕರಿಂದ ಬರುವ ದೂರುಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಎಸಿಬಿ ಹಾಗೂ ಲೋಕಾಯುಕ್ತದಲ್ಲಿ ಒಮ್ಮೆ ದೂರು ದಾಖಲಾದರೆ ಅಧಿಕಾರಿಗಳು ತನಿಖೆಯನ್ನು ಎದುರಿಸಲೇ ಬೇಕು. ಹೀಗಾಗಿ ಸಾರ್ವಜನಿಕರ ಕೆಲಸಗಳನ್ನು ಕಾನೂನು ವ್ಯಾಪ್ತಿಯಲ್ಲಿ ಮಾಡುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲೂ ಸಾರ್ವಜನಿಕರ ಕುಂದು-ಕೊರತೆ ಸಭೆಗಳನ್ನು ನಡೆಸಲಾಗುವುದು ಎಂದರು.
ಸರ್ಕಾರಿ ಅನುದಾನ ಬಳಕೆಯಲ್ಲಿನ ತಾರತಮ್ಯ,ಭ್ರಷ್ಟಾಚಾರ,ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಮುಂತಾದ ಪ್ರಕರಣಗಳನ್ನು ಎಸಿಬಿಯಲ್ಲಿ ದಾಖಲಿಸಲು ಅವಕಾಶ ಇದೆ. ಜಿಲ್ಲೆಯಲ್ಲಿ ದಾಖಲಾಗಿರುವ 250 ಪ್ರಕರಣಗಳಲ್ಲಿ 50 ಪ್ರಕರಣಗಳು ಮಾತ್ರ ನಮ್ಮ ತನಿಖಾ ವ್ಯಾಪ್ತಿಗೆ ಬರುತ್ತಿವೆ. ಉಳಿದ ಬಹುತೇಕ ಪ್ರಕರಣಗಳು ನ್ಯಾಯಾಲಯ ವ್ಯಾಪ್ತಿಗೆ ಒಳಪಟ್ಟಿವೆ. ಯಾವುದೇ ಪ್ರಕರಣ ಈಗಾಗಲೇ ಯಾವುದೇ ಹಂತದ ನ್ಯಾಯಾಲಯದ ವಿಚಾರಣೆಯಲ್ಲಿ ಇದ್ದ ಸಂದರ್ಭದಲ್ಲಿ ಎಸಿಬಿ ತನಿಖೆ ನಡೆಸುವ ಅಥವಾ ಕ್ರಮ ಕೈಗೊಳ್ಳಲು ಅವಕಾಶ ಇರುವುದಿಲ್ಲ.ಆದರೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇಲ್ಲದೆ ಎಸಿಬಿಯಲ್ಲಿ ದೂರು ದಾಖಲಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಕೋಳೂರು ನಿವಾಸಿ ಸಂಪಂಗಿರಾಮಯ್ಯ, ತಾಲ್ಲೂಕು ಕಚೇರಿಯಿಂದ ಹಳೇಯ ಪಹಣಿ ಸೇರಿದಂತೆ ಯಾವುದೇ ದಾಖಲೆಗಳು ಪಡೆಯಬೇಕಿದ್ದರು ರೈತರು ಅಲೆದಾಡುವಂತಾಗಿದೆ. ಹಣ ನೀಡಿದರೆ ತಕ್ಷಣ ದೊರೆಯುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸಿಬಿ ಡಿವೈಎಸ್‌ಪಿ ಅವರಿಗೆ ಲಿಖಿತ ದೂರು ನೀಡಿದರು.
ಹಣಬೆ ಗ್ರಾಮದಲ್ಲಿ ರಸ್ತೆ ಅಡ್ಡಲಾಗಿ ನಿರ್ಮಿಸಲಾಗಿರುವ ಮನೆಗೆ ಪಂಚಾಯಿತಿ ವತಿಯಿಂದ ಅನುದಾನ ನೀಡಲಾಗಿದೆ. ಇದರಿಂದ ಸಾರ್ವಜನಿಕರು ನಡೆದಾಡಲಿ ಕಷ್ಟವಾಗಿದೆ. ಈ ಕುರಿತು ಪಂಚಾಯಿತಿಗೆ ದೂರು ನೀಡಿದ್ದರು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಮುನೇಗೌಡ ಅವರು ದೂರು ನೀಡಿದರು.
ಕುಂದು-ಕೊರತೆ ಸಭೆಯಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ, ಎಸಿಬಿ ಸರ್ಕಲ್ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ, ಕಾನ್‌ಸ್ಟೇಬಲ್ ಧನಂಜಯ ಹಾಗೂ ವಿವಿಧ ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

