
ದೊಡ್ಡಬಳ್ಳಾಪುರ: ಅಗತ್ಯ ವಸ್ತುಗಳ ಬೆಲೆ, ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಎಐಸಿಸಿ ನಿರ್ದೇಶನದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಫೆ.22ರ ಸೋಮವಾರ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು,ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆ ಯಾಗುತ್ತಿದ್ದು ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರ ವಾಗಿ ಮಾರ್ಪಾಡಾಗುತ್ತಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಶಾಸಕ ಟಿ. ವೆಂಕಟರಮಣಯ್ಯ ಹಾಗೂ ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.
ಪ್ರತಿಭಟನಾ ಮೆರವಣಿಗೆಯು ನಗರದ ನೆಲದಾಂಜನೆಯ ದೇವಸ್ಥಾನದಿಂದ ಆರಂಭವಾಗಿ ತಾಲ್ಲೂಕು ಕಛೇರಿಯ ವರೆಗೂ ನಡೆಯಲಿದ್ದು ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಪುಷ್ಪಾಅಮರನಾಥ್, ಭೈರತಿ ಸುರೇಶ್, ಕೃಷ್ಣ ಬೈರೇಗೌಡ, ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ, ಅದ್ದೆ ಮಂಜುನಾಥ್ ಸೇರಿದಂತೆ ಕೆಪಿಸಿಸಿಯ ಎಲ್ಲಾ ಮುಖಂಡರು, ಜಿಲ್ಲಾ ಮತ್ತು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ನ ಎಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 50 ರ ಗಡಿ ದಾಟುತ್ತಿದ್ದಂತೆ ಹೆಸರಾಂತ ಚಿತ್ರ ನಟರಾದ ಅಮಿತಾಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಟೀಕಿಸಿದ್ದರು, ಆದರೆ ಇಂದು ನೂರರ ಗಡಿ ದಾಟುತ್ತಿದ್ದರೂ ಯಾವೊಬ್ಬ ಕಲಾವಿದರೂ ಸಹ ಬಾಯ್ಬಿಡದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಲಕ್ಷ್ಮೀಪತಿ ಟೀಕಿಸಿದರು.
ಶಿಷ್ಟಾಚಾರ ಉಲ್ಲಂಘನೆ: ಇದೇ ವೇಳೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಹೆಸರಿನಡಿ ರಾಜ್ಯ ಸರ್ಕಾರ ಅಯೋಜಿಸಿರುವ ಕಾರ್ಯಕ್ರಮಕ್ಕೆ ನಮ್ಮ ಪಕ್ಷದ ಬೆಂಬಲವಿದೆ. ಆದರೆ ಕಾರ್ಯಕ್ರಮದ ನಾಮಫಲಕಗಳಲ್ಲಿ ತಾಲೂಕಿನ ಶಾಸಕರನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘನೆ ಮತ್ತು ಒಂದು ಪಕ್ಷದ ಕಾರ್ಯಕ್ರಮ ಎಂದು ರೂಪಾಂತರ ಗೊಳ್ಳುತ್ತಿರುವುದು ಖಂಡನೀಯ. ದೊಡ್ಡಬಳ್ಳಾಪುರ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ನಗರ ಘಟಕದ ಅಧ್ಯಕ್ಷ ಅಂಜನಮೂರ್ತಿ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿವೆಂಕಟೇಶ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

