
ಬೆಂಗಳೂರು: ಚಿಕ್ಕಬಳ್ಳಾಪುರದ ಹಿರೇನಾವಲ್ಲಿ ಗ್ರಾಮದ ಬಳಿ ಕಲ್ಲು ಕ್ವಾರಿಯಲ್ಲಿ ಜೆಲೆಟಿನ್ ಸ್ಪೋಟ ದುರಂತದಲ್ಲಿ 6 ಕ್ಕೂ ಹೆಚ್ಚು ಜನ ಸಾವನಪ್ಪಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಇದರ ಬೆನ್ನಲ್ಲೆ ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಈ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಿವಮೊಗ್ಗದ ಜಿಲೆಟಿನ್ ಸ್ಪೋಟದ ತಿಂಗಳ ಅವಧಿಯಲ್ಲಿ ನಡೆದ ಚಿಕ್ಕಬಳ್ಳಾಪುರ ಸ್ಪೋಟ ರಾಜ್ಯ ಸರ್ಕಾರದ ನಿಷ್ಕ್ರಿಯತೆ, ಬೇಜವಾಬ್ದಾರಿತನ ಮತ್ತು ಅಕ್ರಮದಲ್ಲಿ ಷಾಮೀಲಾಗಿರುವ ಭ್ರಷ್ಟತನಕ್ಕೆ ಸಾಕ್ಷಿ. ಮುಖ್ಯಮಂತ್ರಿಗಳೇ, ನೀವು ಯಾರನ್ನು ರಕ್ಷಿಸುತ್ತಿದ್ದೀರಿ? ಜನರನ್ನೇ? ಭ್ರಷ್ಟರನ್ನೇ? ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ ಕಲ್ಲು ಕ್ವಾರಿಯಲ್ಲಿ ಆರು ಮಂದಿ ಸಾವಿಗೀಡಾಗಿರುವುದು ಜಿಲೆಟಿನ್ ಸ್ಪೋಟದಿಂದ ಅಲ್ಲ. ಬದಲಿಗೆ ಈ ಅಮಾಯಕ ಕಾರ್ಮಿಕರು ಅಕ್ರಮ ಗಣಿಗಳನ್ನು ಸಕ್ರಮ ಮಾಡಲು ಹೊರಟಿರುವ ಮುಖ್ಯಮಂತ್ರಿಗಳ ದುರಾಡಳಿತಕ್ಕೆ ಬಲಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಮುಖ್ಯಮಂತ್ರಿ ಅವರು ತಕ್ಷಣ ಆದೇಶಿಸಬೇಕು. ಇದಕ್ಕಿಂತ ಮೊದಲು ಈ ಘಟನೆಗೆ ಕಾರಣರಾದ ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ಅಮಾನತ್‌ನಲ್ಲಿಟ್ಟು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೂ ಆಂಧ್ರಪ್ರದೇಶದ ಗಣಿಲೂಟಿಕೋರರಿಗೂ ನೇರವಾದ ಸಂಬಂಧ ಇದೆ. ವಿಧಾನಸೌಧದಿಂದ ಜಿಲ್ಲಾಮಟ್ಟದ ವರೆಗೆ ಎಲ್ಲರೂ ಇದರಲ್ಲಿ ಷಾಮೀಲಾಗಿದ್ದಾರೆ. ಚಿಕ್ಕಬಳ್ಳಾಪುರದ ಈ ಅಕ್ರಮ ಗಣಿಗಾರಿಕೆ ಜಿಲ್ಲೆಯ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಅವರ ಗಮನಕ್ಕೆ ಬಂದಿರಲಿಲ್ಲವೇ?
ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಅನಧಿಕೃತ ಕ್ರಷರ್, ಕ್ವಾರಿಗಳಿವೆ ಎಂದು ಹೇಳಲಾಗುತ್ತಿದೆ. ಇವುಗಳ ಪಟ್ಟಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚುವ ಕೆಲಸ ಶುರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಚಿಕ್ಕಬಳ್ಳಾಪುರದ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟದಿಂದ 6 ಜನ ಜೀವ ಕಳೆದುಕೊಂಡಿರುವುದಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಸರ್ಕಾರದ ಅಸಡ್ಡೆಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಳೆದ ಒಂದು ತಿಂಗಳಲ್ಲೇ ಎರಡನೇ ಬಾರಿ ಇಂತಹ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದಲ್ಲಿನ ಸ್ಫೋಟ ಸಮಯದಲ್ಲೇ, ಈ ಸ್ಫೋಟಕಗಳ ನಿರ್ವಹಣೆ, ಸಾಗಣೆ ಬಗ್ಗೆ ಒಂದು ಸುರಕ್ಷಿತ ವ್ಯವಸ್ಥೆ ನಿರ್ಮಿಸಬೇಕು, ನೀತಿ-ನಿಯಮಗಳ ಕಟ್ಟುನಿಟ್ಟು ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ನಾನು ಹೇಳಿದ್ದೆ.
ಆದರೆ ತನ್ನ ಆಂತರಿಕ ಸಮಾಸ್ಯೆಗಳಲ್ಲೇ ಮುಳುಗಿರುವ ಈ ಸರಕಾರಕ್ಕೆ ಇತ್ತ ಗಮನ ಹರಿಸಲು ಸಾಧ್ಯವಾಗಿಲ್ಲ. ಮಾಧ್ಯಮಗಳ ಮುಂದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಕೈಗೊಂಡಿದ್ದರೆ ಇಂತಹ ದುರಂತ ಮರುಕಳಿಸುತ್ತಿರಲಿಲ್ಲ ಎಂದು ಶಿವಕುಮಾರ್ ಅವರು ಕಿಡಿಕಾರಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಎನ್ನುವ ಮಾತು ಹಾಸ್ಯಾಸ್ಪದವಾಗಿದೆ. ಹೇಳಿಕೆ ನೀಡುವ ಸರಕಾರದ ಪ್ರತಿನಿಧಿಗಳು ಜೋಕರ್ ಗಳಂತೆ ಕಾಣುತ್ತಿದ್ದಾರೆ. ಇದರ ಪರಿಣಾಮವೇ ಚಿಕ್ಕಬಳ್ಳಾಪುರದಲ್ಲಿ ಆರು ಮುಗ್ಧ ಜೀವಿಗಳ ಬಲಿ ಆಗಿರುವುದು.
ಅಕ್ರಮ ಗಣಿಗಾರಿಕೆ ನಿಯಂತ್ರಣ ಮಾಡುತ್ತೇವೆ ಎನ್ನುವ ರಾಜ್ಯ ಸರ್ಕಾರ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ ಎಂಬುದಕ್ಕೆ ಈ ದುರಂತ ಸಾಕ್ಷಿ. ಈ ಸರ್ಕಾರ ಹೇಳುವುದೊಂದು, ಮಾಡುವುದೊಂದು.
ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ರಾಜ್ಯ ಸರ್ಕಾರ ಇನ್ನಾದರೂ ನಿಜವಾಗಿ ಎಚ್ಚೆತ್ತುಕೊಂಡು, ಅಮಾಯಕ ಜೀವಗಳು ಬಲಿಯಾಗದಂತೆ ನೋಡಿಕೊಳ್ಳಬೇಕು’ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಮೂಲಕ ಫಾಲೋ ಮಾಡಿ. ನಮ್ಮೋಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

