
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ದೇವಾಂಗ ಸಮುದಾಯ ಬಹುಸಂಖ್ಯಾತರಾಗಿದ್ದರೂ ಸಹ ರಾಜಕೀಯ ಅಸ್ತಿತ್ವ ಪಡೆದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಈ ದಿಸೆಯಲ್ಲಿ ದೇವಾಂಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಕಲ್ಪ, ದೇವಾಂಗ ಸಮುದಾಯದ ಸಮಗ್ರ ಪ್ರಗತಿ ಹಾಗೂ ದೇವಾಂಗ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಒತ್ತಾಯಿಸಿ ಮಾರ್ಚ್ 1ರಂದು ದೇವಾಂಗ ಸಂಘಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಂಗ ಸಮನ್ವಯ ಸಮಿತಿ ಸಂಚಾಲಕ ಎಂ.ಜಿ ಶ್ರೀನಿವಾಸ್ ತಿಳಿಸಿದರು.
ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ದೇವಾಂಗ ಸಮನ್ವಯ ಸಮಿತಿ ವತಿಯಿಂದ ನಡೆದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 52 ಕ್ಷೇತ್ರಗಳಲ್ಲಿ ದೇವಾಂಗ ಸಮುದಾಯದ ಪ್ರಭಾವವಿದ್ದು, 13 ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿದೆ. ಇದರಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರವೂ ಸೇರಿದೆ. ದೊಡ್ಡಬಳ್ಳಾಪುರದಲ್ಲಿ ಈವರೆಗಿನ ಶೇ.75ರಷ್ಟು ಸಮೀಕ್ಷೆ ನಡೆಸಿರುವ ಪ್ರಕಾರ 35 ಸಾವಿರಕ್ಕೂ ಹೆಚ್ಚು ದೇವಾಂಗ ಸಮುದಾಯದವರಿದ್ದಾರೆ.
1932ರಿಂದ ಕೊಂಗಾಡಿಯಪ್ಪನವರು ಪುರಸಭೆಯ ಪ್ರಥಮ ಅಧ್ಯಕ್ಷರಾಗಿದ್ದರಿಂದ ಹಿಡಿದು ಸುಮಾರು 50 ವರ್ಷಗಳವರೆಗೆ ರಾಜಕೀಯವ ವಲಯದಲ್ಲಿ ಹಾಗೂ ವಿವಿಧ ಸಹಕಾರ ಸಂಘಗಳಲ್ಲಿ ದೇವಾಂಗ ಸಮುದಾಯದ ಮುಖಂಡರ ಪಾತ್ರ ಮಹತ್ವದ್ದಾಗಿತ್ತು. ತಾಲೂಕಿನ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದ್ದ ಸಮುದಾಯ ಹಲವಾರು ನಾಯಕರನ್ನು ಬೆಳೆಯಲು ಪ್ರೋತ್ಸಾಹಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಹಿಂದೆ ಸರಿಯುವ ವಾತಾವರಣ ಸೃಷ್ಟಿಯಾಗುತ್ತಿದೆ. ಸಮಾವೇಶ ನಮ್ಮ ಶಕ್ತಿ ಕ್ರೋಢೀಕರಣಗೊಳಿಸಲು ಸಂಘಟಿಸಲಾಗುತ್ತಿದ್ದು, ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರ, ವಿರೋಧವಾಗಿ ಅಲ್ಲ. ಮುಂಬರುವ ದಿನಗಳಲ್ಲಿ ಹಿಂದುಳಿದ ವರ್ಗದವರನ್ನು ಒಗ್ಗೂಡಿಸುವ ಚಿಂತನೆಯಿದೆ ಎಂದರು.
ದೇವಾಂಗ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಯಾಗಬೇಕು. ಸಮುದಾಯಕ್ಕೆ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪೂರಕವಾಗಿ ಮೀಸಲು ವ್ಯವಸ್ಥೆಯಾಗಬೇಕು. ರಾಜಕೀಯದಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು.ಸಮಗ್ರ ಸಂಘಟನೆಗೆ ಎಲ್ಲಾ ಸಂಘಟನೆಗಳನ್ನು ಒಳಗೊಂಡು ಕಾರ್ಯ ನಿರ್ವಹಿಸಬೇಕು. ಸ್ಥಳೀಯ ಸಂಸ್ಥೆ ಸೇರಿ ಆಯಕಟ್ಟಿನ ಹುದ್ದೆಗಳನ್ನು ಪಡೆಯಲು ಸಾಮಾಜಿಕ, ಆರ್ಥಿಕ ಭಾಷೆ ಭಿನ್ನತೆಗಳನ್ನು ಮೀರಿ ಒಗ್ಗೂಡಬೇಕು ಎನ್ನುವ ಧ್ಯೇಯೋದ್ದೇಶಗಳನ್ನು ಸಮಾವೇಶ ಹೊಂದಿದೆ ಎಂದು ತಿಳಿಸಿದರು.
ಮಾರ್ಚ್.1ಕ್ಕೆ ಬೃಹತ್ ಸಮಾವೇಶ: ದೇವಾಂಗ ಸಮನ್ವಯ ಸಮಿತಿ ವತಿಯಿಂದ ಮಾ.1ಕ್ಕೆ ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ದೇವಾಂಗ ಸಂಘಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಹಂಪಿ ಹೇಮಕೂಟದ ಪೀಠಾಧ್ಯಕ್ಷ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಕೆ.ನಾರಾಯಣ, ಆಂಧ್ರದ ದೇವಾಂಗ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬೀರಕ ಸುರೇಂದ್ರ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರಮೇಶ್ ಮೊದಲಾದವರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದೇವಾಂಗ ಮಂಡಲಿ ಅಧ್ಯಕ್ಷ ಕೆ.ಜಿ.ದಿನೇಶ್, ಗಾಯಿತ್ರಿ ಪೀಠ ಮಿತ್ರಬಳಗ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಆಂಧ್ರ ದೇವಾಂಗ ಸಂಕ್ಷೇಮ ಟ್ರಸ್ಟ್ ಕಾರ್ಯದರ್ಶಿ ಡಿ.ಎ.ಶ್ರೀನಾಥ್, ಟಿ.ಎಂಸಿಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ನಗರಸಭೆ ಮಾಜಿ ಸದಸ್ಯ ಲೋಕೇಶ್ ಬಾಬು, ಆಂಧ್ರ ದೇವಾಂಗ ಸಂಘದ ನಿರ್ದೇಶಕ ಕೇಶವಮೂರ್ತಿ, ದೇವಾಂಗ ಮಂಡಳಿ ಸಹ ಕಾರ್ಯದರ್ಶಿ ಯೋಗ ನಟರಾಜ್, ನಿರ್ದೇಶಕ ಅಖಿಲೇಶ್, ಮುಖಂಡರಾದ ಕೆರಮುಲು ಬದ್ರಿ, ಶಿವಾನಂದ್, ಎನ್.ಜಿ.ಕುಮಾರ್, ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

