ಚಿಕ್ಕಬಳ್ಳಾಪುರ: ಬಯಲು ಸೀಮೆಯ ಬರದ ಬೀಡು ಎಂದೇ ಖ್ಯಾತಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ವರುಣ ಕರುಣೆ ತೋರಿದ್ದು, ಕಳೆದೊಂದು ವರ್ಷದಿಂದ ಮಲೆ ನಾಡಿನಂತಾಗಿದೆ.

ಎಲ್ಲಿ ನೋಡಿದರೂ ಹಚ್ಚ ಹಸಿರು ಜೊತೆಗೆ ಮಳೆಯ ಆರ್ಭಟ. ಇದೀಗ ಸುರಿಯುತ್ತಿರುವ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದು ಅವಾಂತರ ಸೃಷ್ಟಿಯಾಗಿದೆ. ಕೆಲವೆಡೆ ಬೆಳೆಗಳು ಜಲಾವೃತವಾದರೆ, ಇನ್ನೂ ಕೆಲವೆಡೆ ಮಳೆಯ ನೀರು ರಸ್ತೆಗಳನ್ನೇ ನುಗ್ಗಿದೆ.

ಮಳೆ ಮಳೆ ಎಂದು ಹಾತೊರೆಯುತ್ತಿದ್ದ ಬಯಲು ಸೀಮೆಯ ಜನ, ಈಗ ಮಳೆಯ ಹೆಸರು ಕೇಳಿದರೆ ಕೆಲಕಾಲ ಬೆಚ್ಚಿ ಬೀಳುವಂತಾಗಿದ್ದಾರೆ. ಕಳೆದ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ಸುರಿದ ಮಳೆಯ ಅವಾಂತರಗಳನ್ನು ಇನ್ನೂ ಸುಧಾರಿಸಿಕೊಳ್ಳಲು ಆಗಿಲ್ಲ. ಈಗಲೂ ಹಗಲು ರಾತ್ರಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕೆಲವೆಡೆ ಬೆಳೆಗಳು ಜಲಾವೃತವಾದರೆ, ಇನ್ನೂ ಕೆಲವೆಡೆ ಮೋರಿಗಳು, ರಸ್ತೆಗಳು, ಸೇತುವೆಗಳು ಜಲಾವೃತವಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನ್ ಪೇಟೆಯಲ್ಲಿ ಬೃಹತ್ ಗಾತ್ರದ ಹಳೆಯ ಅರಳಿ ಮರ ಉರುಳಿ ಬಿದ್ದು, ಅವಾಂತರಗಳನ್ನೇ ಸೃಷ್ಟಿಸಿದೆ. ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ರಸ್ತೆಗೆ ಅಡ್ಡಲಾಗಿ ಸುಲ್ತಾನ್ ಪೇಟೆಯಲ್ಲಿ ಮರ ಬಿದ್ದಿರುವ ಕಾರಣ ದಿನವಿಡೀ ರಸ್ತೆ ಬಂದ್ ಆಗಿತ್ತು. ಮರದ ಬಳಿ ಇದ್ದ ಮನೆ ಅಂಗಡಿಯ ಮೇಲೂ ಮರ ಬಿದ್ದಿದೆ. ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದರೆ ವಿದ್ಯುತ್ ಲೈನ್‌ಗೆ ಮರ ಬಿದ್ದಿರುವ ಕಾರಣ 8 ವಿದ್ಯುತ್ ಕಂಬಗಳು ಮುರಿದು ಬಿದ್ದು, ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಮತ್ತೊಂದೆಡೆ ಬತ್ತಿ ಹೋಗಿದ್ದ ನದಿ ನಾಲೆಗಳು ಉಕ್ಕಿ ಹರಿಯುತ್ತಿವೆ.
ಬಾಗೇಪಲ್ಲಿ ತಾಲೂಕು ಚೇಳೂರು ಚಂಡ್ರಾಯಪ್ಪನಪಲ್ಲಿ ಗ್ರಾಮದ ರಸ್ತೆ ಕೊಚ್ಚಿ ಹೋಗಿದೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೋರೈಸುವ ಜಕ್ಕಲಮಡುಗು ಜಲಾಶಯ ಉಕ್ಕಿ ಹರಿದು, ಸೇತುವೆ ನೀರಿನ ಬಳಿ ಜನರು ಮೀನು ಹಿಡಿಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ….
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
