ದೊಡ್ಡಬಳ್ಳಾಪುರ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿಗೆ ಮಾರಕವಾದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮತ್ತು ವಸತಿ ಸಚಿವ ವಿ.ಸೋಮಣ್ಣ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ನಡವಳಿಕೆ ಖಂಡಿಸಿ, ಹಾಗೂ ಸಿ.ಪಿ.ಯೋಗೇಶ್ವರ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸಚಿವ ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ತಡೆ ಕಾಯ್ದೆಯಡಿಯಲ್ಲಿ ಇಬ್ಬರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಪ್ರಜಾ ವಿಮೋಚನಾ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ, ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯಹನುಮಣ್ಣ, ಜಿಲ್ಲಾಧ್ಯಕ್ಷ ಅಶೋಕ್, ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನಾಂಗಗಳು ನಮಗೆ ಮತ ನೀಡುವುದಿಲ್ಲ, ಅವರಿಗೆ ಅನುದಾನ ನೀಡಿದರೆ ತಲೆಯ ಮೇಲೆ ಕೂರುತ್ತಾರೆ ಆದ್ದರಿಂದ ಎಸ್ಸಿ ಎಸ್ಟಿಗಳಿಗೆ ನೀಡುವ ಅನುದಾನವನ್ನು ನಿಲ್ಲಿಸುವಂತೆ ಸೂಚನೆ ನೀಡಿ ಪತ್ರ ನೀಡಿರುವುದು ಜನಾಂಗದ ಅಭಿವೃದ್ಧಿಯ ಮೇಲೆ ಮಾರಕವಾದ ಪರಿಣಾಮ ಬೀರುತ್ತದೆ. ಹಾಗೆಯೇ ಜವಾಬ್ದಾರಿ ಸ್ಥಾನದಲ್ಲಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿರುವುದು ಹಿಟ್ಲರ್ ಸಂಸ್ಕೃತಿಯನ್ನು ಪ್ರತಿ ಬಿಂಬಿಸುತ್ತಿದೆ.

ಕಾಂತಾರ ಸಿನಿಮಾ ಬೂತಾರಾಧನೆ ಹಿಂದು ಸಂಸ್ಕೃತಿ ಅಲ್ಲ ಅದು ದ್ರಾವಿಡ ಸಂಸ್ಕೃತಿ ಎಂದ ನಟ ಚೇತನ್ ಅಹಿಂಸಾ ಅವರಿಗೆ ನೀಡುತ್ತಿರುವ ಕಿರುಕುಳ ಮತ್ತು ಬೆದರಿಕೆ. ಡಾಲಿ ಧನಂಜಯ ಅವರ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಮತ್ತು ಕರಗದ ವೇಷದಾರಿಗಳ ಮೇಲೆ ಹಲ್ಲೆ ನಡೆದಿದೆ ಎಂದು ಅಪಪ್ರಚಾರ ಮಾಡಿ, ಧನಂಜಯ ಅವರಿಗೆ ಬೆದರಿಕೆ ಹಾಕುವ ಕೃತ್ಯಗಳು ನಡೆಯುತ್ತಿರುವುದು ರಾಜ್ಯದಲ್ಲಿ ಅಹಿಂದ ಸಮುದಾಯಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿ ದಬ್ಬಾಳಿಕೆಯನ್ನು ಸೂಚಿಸುತ್ತಿದೆ.
ಈ ಶೋಷಣೆ ದೌರ್ಜನ್ಯದ ಘಟನೆಗಳನ್ನು ಪಿವಿಎಸ್ ಖಂಡಿಸುತ್ತದೆ. ಈ ಎಲ್ಲಾ ಘಟನೆಗಳನ್ನು ಖಂಡಿಸಿ ಪ್ರಜಾ ವಿಮೋಚನಾ ಸಮಿತಿಯ ವತಿಯಿಂದ ಪ್ರತಿಭಟಿಸುವ ಮೂಲಕ ಹಕ್ಕೊತ್ತಾಯಗಳನ್ನು ಮುಂದಿಡಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮಾರಕವಾದ ಹೇಳಿಕೆ ನೀಡಿರುವ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂದಿಸಬೇಕು.ದಲಿತ ಮಹಿಳೆಯ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂದಿಸಬೇಕು.
ನಟ ಚೇತನ್ ಅಹಿಂಸಾ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದ್ದು ಈ ಕೂಡಲೇ ಅವರಿಗೆ ಸೂಕ್ತ ರಕ್ಷಣೆ ನೀಡಿ ಅವರಿಗೆ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಬೇಕು.
ಡಾಲಿ ಧನಂಜಯ ಅವರ ವಿರುದ್ಧ ಅನಗತ್ಯವಾಗಿ ವಿವಾದ ಉಂಟುಮಾಡಿ ಕೋಮುವಾದದ ವಿಷ ಬೀಜ ಬಿತ್ತುತ್ತಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎನ್ನುವ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರಜಾ ವಿಮೋಚನಾ ಸಮಿತಿಯ ತಾಲೂಕು ಅಧ್ಯಕ್ಷ ರಾಜಶೇಖರ್, ಗೌರವಾಧ್ಯಕ್ಷ ಮೈಲಾರಪ್ಪ , ಜಿಲ್ಲಾ ಗೌರವಾಧ್ಯಕ್ಷ ಎಸ್.ಎಂ.ಮುನಿದಾಸಪ್ಪ, ಕಾರ್ಯದರ್ಶಿ ಅರ್ಜುನ್, ಸಂಘಟನಾ ಕಾರ್ಯದರ್ಶಿ ರಾಜ್ ಕುಮಾರ್ ಮಹಿಳಾ ಅಧ್ಯಕ್ಷೆ ರತ್ನಮ್ಮ, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್, ಮುಖಂಡ ಸಂಜೀವ್ ನಾಯಕ್, ನಗರಸಭಾ ಮಾಜಿ ಸದಸ್ಯ ಜಿ.ಸತ್ಯನಾರಾಯಣ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
