ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಕನ್ಯಾಕುಮಾರಿಯು ಒಂದಾಗಿದ್ದು ಇದು ತಮಿಳುನಾಡು ರಾಜ್ಯದಲ್ಲಿದೆ. ಈ ಊರಿನಲ್ಲಿರುವ ಕನ್ಯಾಕುಮಾರಿ ದೇವಾಲಯದಿಂದಲೇ ಕನ್ಯಾಕುಮಾರಿ ಎಂಬ ಹೆಸರು ಬಂದಿದೆ.
ಭಾರತದ ಕಟ್ಟ ಕಡೆಯ ಪ್ರದೇಶವಾಗಿದ್ದು, ಇಲ್ಲಿ ಮೂರು ಮಹಾಸಾಗರಗಳು (ಹಿಂದು ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿಸಮುದ್ರ) ಒಂದೆಡೆ ಸೇರುವ ತ್ರಿವೇಣಿ ಸಾಗರ ಸಂಗಮವಾಗಿದೆ. ಪಾರ್ವತಿ ದೇವಿಯ 108 ಶಕ್ತಿಪೀಠಗಳಲ್ಲಿ ಇದು ಒಂದು. ಉಪಾಸನೆ ಸಿನಿಮಾದ ‘ಭಾರತ ಭೂಷಿರ ಮಂದಿರ ಸುಂದರಿ ನಯನ ಮನೋಹರಿ ಕನ್ಯಾಕುಮಾರಿ’ ಈ ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ಅದ್ಭುತವಾದ, ಅಪರೂಪದ, ರಮಣೀಯವಾದ ಪ್ರಕೃತಿ ಸೌಂದರ್ಯದ ನೋಟಗಳು ಇಲ್ಲಿ ಸಿಗುತ್ತದೆ.
ಕನ್ಯಾಕುಮಾರಿಗೆ ಪೌರಾಣಿಕ ಹಿನ್ನೆಲೆಯುಳ್ಳ ಒಂದು ಕಥೆ ಇದೆ: ಇಲ್ಲೊಬ್ಬ ಬಾಣಸುರ ಎಂಬ ರಾಕ್ಷಸನಿದ್ದು ಅವನು ಶಿವನನ್ನು ಕುರಿತು ತಪಸ್ಸು ಮಾಡಿ ಅಮರತ್ವದ ವರವನ್ನು ಪಡೆಯುತ್ತಾನೆ. ಶಿವನು ವರವನ್ನು ಕರುಣಿಸುತ್ತಾನೆ. ಆದರೆ ಅಮರತ್ವದ ಕೊಡಲು ಸಾಧ್ಯವಿಲ್ಲ ಆದ್ದರಿಂದ ಕನ್ಯೆಯಿಂದ ನಿನಗೆ ಸಾವು ಬರಲಿ ಎಂದು ಹೇಳುತ್ತಾನೆ. ಎಲ್ಲಾ ರಾಕ್ಷಸರಂತೆ ಬಾಣಾಸುರನು ಶಿವನಿಂದ ವರ ಪಡೆದ ಮೇಲೆ ಮತ್ತಷ್ಟು ದುರಾಚಾರಿ ಮಾರ್ಗವನ್ನು ಹಿಡಿದು ಎಲ್ಲರಿಗೂ ಹಿಂಸೆ ಕೊಡಲು ಶುರು ಮಾಡುತ್ತಾನೆ.
ಎಲ್ಲೆಲ್ಲಿ ನೋಡಲ್ಲಿ, ಹಿಂಸೆ ಅಧರ್ಮಗಳೇ ನಡೆಯುತ್ತದೆ. ಬೇಸತ್ತ ಭೂದೇವಿ ವಿಷ್ಣು ವನ್ನು ಕುರಿತು ತಪಸ್ಸು ಮಾಡಿ ಈ ರಾಕ್ಷಸನ ಕಾಟದಿಂದ ಮುಕ್ತಿ ಮಾಡು ಎಂದು ಕೇಳುತ್ತಾಳೆ ಆಗ ವಿಷ್ಣು, ಇವನನ್ನು ಸಂಹಾರ ಮಾಡಲು ಶಕ್ತಿ ದೇವತೆ ಪಾರ್ವತಿ ಅವತಾರ ವಾಗಬೇಕು. ಅದಕ್ಕಾಗಿ ಯಾಗ ಮಾಡಬೇಕು ಎಂದು ಭೂದೇವಿಗೆ ಯಾಗವನ್ನು ಮಾಡಲು ಹೇಳುತ್ತಾನೆ. ಭೂಮಾತೆ ಮಾಡಿದ ಯಾಗದ ಫಲವಾಗಿ ಅಗ್ನಿಕುಂಡದಲ್ಲಿ ಕನ್ಯೆಯ ರೂಪದಲ್ಲಿ ದೇವಿ ಉದ್ಭವಿಸುತ್ತಾಳೆ.
ಕನ್ಯೆಯಾಗಿ ಹುಟ್ಟಿದ ಇವಳಿಗೆ ಶಿವನನ್ನೇ ತನ್ನ ಗಂಡನನ್ನಾಗಿ ಪಡೆಯಬೇಕೆಂದು ಆಸೆ ಹಾಗಾಗಿ ಸದಾ ಕಾಲ ಶಿವನ ಧ್ಯಾನ ಹಾಗೂ ಕಠಿಣ ತಪಸ್ಸಿನಲ್ಲಿ ಮುಳುಗಿರುತ್ತಾಳೆ. ಕಠಿಣ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಕನ್ಯೆಯನ್ನು ಮದುವೆ ಯಾಗಲು ನಿರ್ಧರಿಸುತ್ತಾನೆ. ಒಂದು ಬೆಳಗಿನ ಜಾವಕ್ಕು ಮೊದಲಿನ ಶುಭ ಮುಹೂರ್ತದಲ್ಲಿ ವಿವಾಹ ನಿಶ್ಚಯವಾಯಿತು.
ಈ ವಿಷಯ ನಾರದರಿಗೆ ತಿಳಿಯಿತು. ಬಾಣಾಸುರನ ಸಂಹಾರ ಕನ್ಯೆಯಿಂದ ಆಗಬೇಕು ಎಂಬ ಗುಟ್ಟು ನಾರದರಿಗೆ ಗೊತ್ತಿರುತ್ತದೆ. ಪಾರ್ವತಿ ಅಂಶವಾದ ಕನ್ಯಾಕುಮಾರಿ ಮದುವೆ ಮಾಡಿಕೊಂಡರೆ ಅದು ಸಾಧ್ಯವಿಲ್ಲ ಎಂದು ತಿಳಿದು ವಿಷ್ಣುವಿಗೆ ತಿಳಿಸುತ್ತಾರೆ. ನಾರಾಯಣ ಒಂದು ಉಪಾಯ ಮಾಡುತ್ತಾನೆ. ಅದು ಶಿವನು ಕೈಲಾಸದಿಂದ ಮದುಮಗನಾಗಿ ಹೊರಟು ಬರುತ್ತಿರುವ ಸಮಯಕ್ಕೆ ಸರಿಯಾಗಿ ಕೃಷ್ಣನು ಕೋಳಿಯ ರೂಪ ತಾಳಿ ಕೊಕ್ಕ ಕೋ ಎಂದು ಕೂಗಲು ಆರಂಭಿಸುತ್ತಾನೆ. ಕೋಳಿ ಕೂಗನ್ನು ಕೇಳಿದ ಶಿವನು ಮದುವೆಯ ಮುಹೂರ್ತ ತಪ್ಪಿತು ಆಗಲೇ ಬೆಳಗಾಯಿತು ಎಂದು ಭಾವಿಸಿ ಹಾಗೆ ಕೈಲಾಸಕ್ಕೆ ಹಿಂತಿರುಗಿ ಬಿಡುತ್ತಾನೆ ಇದರಿಂದ ಮದುವೆ ನಿಂತು ಹೋಗುತ್ತದೆ.
ಮದುವೆಯಾಗಲು ಬರದಿರುವ ಶಿವನ ವರ್ತನೆಗೆ ರೋಸಿ ಹೋದ ಕನ್ಯಾಕುಮಾರಿ ತಾನು ಇನ್ನೆಂದೂ ಮದುವೆಯಾಗಲಾರೆ ಕನ್ಯಯಾಗಿಯೇ ಉಳಿಯುತ್ತೇನೆ ಎಂದು ಶಪಥ ಮಾಡುತ್ತಾಳೆ ಮತ್ತು ಸಿಟ್ಟಿನಿಂದ, ವಿವಾಹಕ್ಕಾಗಿ ಜೋಡಿಸಿಟ್ಟುಕೊಂಡಿದ್ದ ಅರಿಶಿಣ, ಕುಂಕುಮ, ಹೂವು, ಅಕ್ಷತೆ, ಎಲ್ಲವನ್ನು ಚೆಲ್ಲಾಪಿಲ್ಲಿಯಾಗುವಂತೆ ಎತ್ತಿ ಎಸೆದು ಬಿಡುತ್ತಾಳೆ
ಮದುವೆಗೆ ತಯಾರು ಮಾಡಿಕೊಂಡಿದ್ದ ಮಂಗಳದ್ರವ್ಯಗಳನ್ನೆಲ್ಲ ಎಸೆದ ಕಾರಣ ಕನ್ಯಾಕುಮಾರಿಯ ಮರಳು ರಾಶಿ ಇಂದಿಗೂ ಸಹ ಬಿಸಿಲಲ್ಲಿ ನೋಡಿದಾಗ ಅರಿಶಿನ ಕುಂಕುಮದ ಬಣ್ಣದಂತೆ ಕೆಂಪು ಮತ್ತು ಬಣ್ಣದಲ್ಲಿ ಹೊಳೆಯುತ್ತದೆ.
ಅಕ್ಷತೆ ಗಾತ್ರದ ಕಲ್ಲುಗಳು ಇವೆ. ಕನ್ಯಾಕುಮಾರಿ ಮದುವೆ ನಿಂತ ಮೇಲೆ, ಅವಳು ಒಬ್ಬಳೇ ಇರುವಾಗ ಅಲ್ಲಿನ ರಾಕ್ಷಸ ಬಾಣಾಸುರನು ಅವಳ ಸೌಂದರ್ಯಕ್ಕೆ ಮಾರು ಹೋಗಿ ಮದುವೆಯಾಗುವಂತೆ ಪೀಡಿಸುತ್ತಾನೆ. ಇದರಿಂದ ಕೋಪಗೊಂಡ ಕನ್ಯಾಕುಮಾರಿ, ಬಾಣಸುರನನ್ನು ಸಂಹರಿಸುತ್ತಾಳೆ. ಆಮೇಲೆ ಕನ್ಯಾಕುಮಾರಿ ಮನದಲ್ಲಿ ಶಿವನನ್ನೇ ತನ್ನ ಗಂಡನೆಂದು ತಿಳಿದು, ಎಂದಿಗೂ ಮದುವೆಯಾಗದೆ ಕನ್ಯಾಕುಮಾರಿ ದೇವಿಯಾಗಿ ನೆಲೆಸುತ್ತಾಳೆ. ಅಲ್ಲಿಗೆ ಬರುವ ಭಕ್ತರನ್ನು ಹರಸುತ್ತಾ ಅವರ ಅಭೀಷ್ಟಗಳನ್ನು ನೆರವೇರಿಸುತ್ತಾಳೆ ಎಂಬ ನಂಬಿಕೆ ಎಲ್ಲರಿಗೂ ಇದೆ.
ಬರಹ: ಆಶಾ ನಾಗಭೂಷಣ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

