ಯಾದಗಿರಿ, (ಸೆ.11): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ, ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಸ್ತಾವದ ಮಾತುಕತೆಗಳ ಬಗ್ಗೆ ಈಗಾಗಲೇ ವಿರೋಧ ವ್ಯಕ್ತಪಡಿಸಿರುವ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರು, ಭಾನುವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಮಹತ್ವದ ಸಭೆಗೆ ಹಾಜರಾಗಿದಿರುವುದು ಕುತೂಹಲ ಕೆರಳಿಸಿದೆ.
ಆದರೆ, ಈ ಗೈರು ಉದ್ದೇಶ ಪೂರ್ವಕವಾಗಿ ಅಲ್ಲ ಎಂದು ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೆ ಶಾಸಕ ಶರಣಗೌಡ ಕಂದಕೂರು ಪ್ರತಿಕ್ರಿಯಿಸಿದ್ದಾರೆ. ಕುಟುಂಬದ ಖಾಸಗಿ ಕಾರ್ಯಕ್ರಮ ಇದುದರಿಂದ ಅಲ್ಲಿಗೆ ಹೋಗಲಿಕ್ಕಾಗಲಿಲ್ಲ ಎಂದರಾದರೂ, ಮೈತ್ರಿ ವಿಚಾರಕ್ಕೆ ತಮ್ಮದು ಈ ಕ್ಷಣಕ್ಕೂ ಸಹಮತ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೈತ್ರಿ ವಿಚಾರವಾಗಿ ಪ್ರಸ್ತಾವಕ್ಕೂ ಮುನ್ನ ನನ್ನದೊಬ್ಬನದ್ದೇ ಅಲ್ಲ, ಎಲ್ಲ ಶಾಸಕರ ಅಭಿಪ್ರಾಯ ಕೇಳಬೇಕಿತ್ತು. ಸಾಧಕ ಬಾಧಕಗಳ ಚರ್ಚಿಸಬೇಕಿತ್ತು, ಕಾರ್ಯಕರ್ತರುಗಳ ಅಭಿಪ್ರಾಯಪಡೆಯಬೇಕಿತ್ತು, ನಾಯಕರುಗಳು ಇದನ್ನೆಲ್ಲ ಏಕೆ ಮುಂಚೆ ಮಾಡಲಿಲ್ಲ. ಉತ್ತರ ಕೊಡಬೇಕು ಎಂದು ಶಾಸಕ ಕಂದಕೂರು ಬೇಸರ ಹೊರಹಾಕಿದರು.
ಅದೇನೇ ಇರಲಿ, ಮೈತ್ರಿಗೆ ಈ ಕ್ಷಣಕ್ಕೂ ನನ್ನ ಸಹಮತ ಇಲ್ಲ. ಮೈತ್ರಿ ನೆಪದಲ್ಲಿ ಲೋಕಸಭೆ ಚುನಾವಣೆಯಲ್ಲಿ ಒಂದೆರೆಡು ಸೀಟ್ ಕೊಟ್ಟು ನಂತರದ ಫಲಿತಾಂಶ ಈಗಿನ ವಿಧಾನಸಭೆ ಚುನಾವಣೆಯ ಫಲಿತಾಂಶದಂತಾದರೆ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕ ಕಂದಕೂರು, ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಇದೆ, ತಾಲೂಕು-ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಬರುತ್ತವೆ ಆಗ ಮೈತ್ರಿಯ ಪರಿಸ್ಥಿತಿ ಏನು? ಟಿಕೆಟ್ ಸಿಗುತ್ತದೆಯೇ ಎಂಬ ಆತಂಕ ಈಗಿನ ಕೆಲವರು ಶಾಸಕರು ಹಾಗೂ ಪಕ್ಷದ ನಿಷ್ಠಾವಂತರಿಗೆ ಕಾಡುತ್ತಿದೆ ಎಂದು ಅವರು ತಿಳಿಸಿದರು.
ಬಿಜೆಪಿಗೆ ನಮ್ಮ ಕ್ಷೇತ್ರದಲ್ಲಿ ಠೇವಣಿ ಕೂಡ ಇಲ್ಲ: ನಮ್ಮದು ಜೆಡಿಎಸ್ ಪಕ್ಷಕ್ಕೆ ನಿಷ್ಠಾವಂತರ ಕುಟುಂಬ. ನಾನು ಅ (ದೇವೇಗೌಡರ) ಕುಟುಂಬದ ಸದಸ್ಯನಿದ್ದೇನೆ. ಆದರೆ, ಬಿಜೆಪಿ ಜೊತೆ ಮೈತ್ರಿ ಈ ಕ್ಷಣಕ್ಕೆ ಸೂಕ್ತ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ಕಂದಕೂರು, ನನ್ನ ಕ್ಷೇತ್ರದಲ್ಲಿ ಬಿಜೆಪಿಗೆ ಠೇವಣಿಯಿಲ್ಲ. ಬಹಳಷ್ಟು ಶಾಸಕರು ಹಾಗೂ ಮಾಜಿ ಶಾಸಕರು ನಮ್ಮ ಪರಿಸ್ಥಿತಿ ಏನು ಅಂತ ಕೇಳುತ್ತಿದ್ದಾರೆ. ಎಂದರು.
ಹಲವು ಶಾಸಕರು ಹಾಗೂ ಮಾಜಿ ಶಾಸಕರುಗಳು ನಮ್ಮ ಭವಿಷ್ಯ ಏನು ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಈ ಕ್ಷಣಕ್ಕೆ ನಾವು ಯಾರ ಮುಂದೆಯೂ ಹೋಗಿ ಮಂಡಿಯುರುವುದು ಸರಿಯಲ್ಲ. ನಾವು ಶಾಸಕರಾದರೆ ಸಾಕು, ಮಂತ್ರಿಯಾದರೆ ಸಾಕು ಎಂದನ್ನೋದು ಸರಿಯಲ್ಲ. ನಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರ ಜೊತೆ ಚರ್ಚಿಸಬೇಕು, ಸಾಧಕ ಬಾಧಕಗಳ ಬಗ್ಗೆ ಚಿಂತನೆ ನಡೆಸಬೇಕು ಎಂದ ಶಾಸಕ ಕಂದಕೂರು, ಮೈತ್ರಿಗೆ ನನ್ನ ಸಹಮತ ಇಲ್ಲ ಎಂದು ಸ್ಪಷ್ಟಪಡಿಸಿದರು. (ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….