ನವದೆಹಲಿ, (ಅ.13): ಸಮರಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ‘ಆಪರೇಷನ್ ಅಜಯ್’ ಎಂಬ ಕಾರ್ಯಾಚರಣೆಗೆ ಚಾಲನೆ ನೀಡಿದ್ದು, ಐವರು ಕನ್ನಡಿಗರೂ ಸೇರಿದಂತೆ 212 ಮಂದಿ ಭಾರತೀಯರನ್ನು ಹೊತ್ತ ಮೊದಲ ವಿಮಾನ ಶುಕ್ರವಾರ ಭಾರತಕ್ಕೆ ಬಂದಿಳಿದಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ವಕ್ತಾರ ಅರಿಂದಮ್ ಬಗ್ಗೆ, ‘ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿರುವುದರಿಂದ ಅಲ್ಲಿ 18 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ.
ಹೀಗಾಗಿ ಇವರ ರಕ್ಷಣೆ ಮಾಡಲು ಸರ್ಕಾರ ಮುಂದಾಗಿದೆ. ಭಾರತದಿಂದ ಹೊರಟಿರುವ ವಿಮಾನ ಗುರುವಾರ ರಾತ್ರಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ತಲುಪಿದೆ. ಮೊದಲ ಗುಂಪಿನಲ್ಲಿ 212 ಮಂದಿಯನ್ನು ಹೊತ್ತು ಶುಕ್ರವಾರ ಭಾರತಕ್ಕೆ ಹಿಂದಿರುಗುವ ನಿರೀಕ್ಷೆಯಿದೆ’ ಎಂದಿದ್ದರು.
ಇದಲ್ಲದೆ ಇಸ್ರೇಲ್‌ನ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಹಮಾಸ್ ದಾಳಿಗಳನ್ನು ಉಗ್ರದಾಳಿ ಎಂದು ಪರಿಗಣಿಸಿದ್ದೇವೆ. ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಈ ನಡುವೆ, ಪ್ಯಾಲೆಸ್ತೀನ್‌ನಲ್ಲಿ ಸಿಲುಕಿರುವ ಭಾರತೀಯರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,’ಗಾಜಾದಲ್ಲಿ ನಾಲ್ವರು ಹಾಗೂ ವೆಸ್ಟ್ ಬ್ಯಾಂಕ್‌ನಲ್ಲಿ 12 ಭಾರತೀಯರು ಸಿಲುಕಿದ್ದಾರೆ ಎಂಬ ಮಾಹಿತಿ ಇದೆ. ಈವರೆಗೂ ಅವರಿಂದ ರಕ್ಷಣೆ ಕೋರಿ ಯಾವುದೇ ಮನವಿ ಬಂದಿಲ್ಲ. ಮನವಿ ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.
5 ಕನ್ನಡಿಗರು ತವರಿಗೆ: ಇಸ್ರೇಲ್‌ನಿಂದ ಭಾರತ ಸರ್ಕಾರ ಕರೆತಂದಿರುವ 212 ಭಾರತೀಯರ ಮೊದಲ ತಂಡದಲ್ಲಿ 5 ಮಂದಿ ಕನ್ನಡಿಗರಿದ್ದಾರೆ ಎನ್ನಲಾಗುತ್ತಿದೆ.
ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಜಯೇಶ್ ತಾಕರ್ಶಿ, ಅಶ್ವಿನಿ ಕೃಷ್ಣ, ಕಲ್ಪನಾ ಗೋಪಾಲ್, ಪ್ರೀತಿ ರಾಜಮನ್ನಾರ್, ಈರಣ್ಣ ಅವರು ಶುಕ್ರವಾರ ದೆಹಲಿಗೆ ಬಂದಿಳಿಯಲಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….