ಮೈಸೂರು, (ಅ.13): ನಗರದ ಪುರಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಮಹಿಷ ದಸರಾ ಉತ್ಸವಕ್ಕೆ ವಿಜೃಂಭಣೆಯ ಚಾಲನೆ ನೀಡಲಾಯಿತು.
ಮೈಸೂರು ದಸರಾ ಮಹೋತ್ಸವ ಆರಂಭಕ್ಕೂ ಮುನ್ನ ಮಹಿಷಾ ದಸರಾ ವಿವಾದ ಉಂಟಾಗಿದೆ. ಪಟ್ಟು ಬಿಡದ ಮಹಿಷಾ ಅಭಿಮಾನಿಗಳು ಟೌನ್ ಹಾಲ್ ನಲ್ಲಿ ಮಹಿಷಾ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.
ನಿಷೇಧಾಜ್ಞೆ ನಡುವೆಯೂ ಬೈಕ್ ರ್ಯಾಲಿ ಜೊತೆ ಮಹಿಷಾ ಟ್ಯಾಬ್ಲೋ ಕೂಡ ತರಲಾಗಿದ್ದು, ಟೌನ್ ಹಾಲ್ ನಲ್ಲಿ ಮೈಸೂರು ಅಸ್ಮಿತೆಗಾಗಿ ಮಹಿಷ ಉತ್ಸವ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದಕ್ಕೂ ಮುನ್ನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮಹಿಷ ದಸರಾ ಆಚರಣಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಹಾಗೂ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ನಂತರ ವೇದಿಕೆ ಮೇಲಿರುವ ಮಹಿಷನ ಪ್ಲೆಕ್ಸ್, ಅಂಬೇಡ್ಕರ್, ಬುದ್ದ ಹಾಗೂ ಮಹಿಷರ ಪ್ರತಿಮೆಗಳಿಗೂ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ.ಕೆ.ಎಸ್ ಭಗವಾನ್, ಪ್ರೊ.ಮಹೇಶ್ ಚಂದ್ರಗುರು, ಪ್ರೊ.ಹರಿರಾಮ್, ಸಾಮಾಜಿಕ ಹೋರಾಟಗಾರ ಬಿಆರ್ ಭಾಸ್ಕರ್ ಪ್ರಸಾದ್ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.
ಮಹಿಷಾ ದಸರಾ ವಿವಾದ ಹಿನ್ನೆಲೆ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಟೌನ್ ಹಾಲ್ ನಲ್ಲಿ ಮಾತ್ರ ಹಲವು ಷರತ್ತುಗಳನ್ನ ವಿಧಿಸಿ ಮಹಿಷಾ ಉತ್ಸವಕ್ಕೆ ಅನುಮತಿ ನೀಡಲಾಗಿತ್ತು. ಪ್ರತಿಭಟನೆ, ಮೆರವಣಿಗೆಗೆ ಅನುಮತಿ ನೀಡಿಲ್ಲ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….