ಲಕ್ಷ್ಮೇಶ್ವರ, (ಜ.08); ಸೂರಣಗಿ ಗ್ರಾಮದಲ್ಲಿ ಕಟೌಟ್ ಕಟ್ಟುವಾಗ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಮೂವರು ಅಭಿಮಾನಿಗಳ ಕುಟುಂಬಸ್ಥರಿಗೆ ರಾಕಿಂಗ್ ಸ್ಟಾರ್ ಯಶ್ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೃತ ಫ್ಯಾನ್ಸ್ ಕುಟುಂಬಸ್ಥರಿಗೆ ಏನು ಅಗತ್ಯವಿದೆಯೋ ಅದನ್ನು ಮಾಡುವ ಭರವಸೆ ನೀಡಿದ್ದೇನೆ. ಎಲ್ಲವನ್ನೂ ಬಹಿರಂಗವಾಗಿ ಹೇಳಿದರೆ ದುರುಪಯೋಗವಾಗುತ್ತದೆ. ನನ್ನ ಮೇಲೆ ಪ್ರೀತಿ ಇದ್ದರೆ ಅಭಿಮಾನಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ.
ಬ್ಯಾನರ್ ಹಾಕಿ ಅಭಿಮಾನ ವ್ಯಕ್ತಪಡಿಸಬೇಕು ಎಂಬುದನ್ನು ನಾವು ಯಾರೂ ಇಷ್ಟಪಡುವುದಿಲ್ಲ. ಪ್ರತಿ ವರ್ಷ ಬರ್ತ್ಡೇ ಬಂದಾಗ ಇಂಥ ಒಂದು ಘಟನೆ ನಡೆದರೆ ಬರ್ತ್ಡೇ ಎಂದರೆ ನನಗೆ ಭಯ ಬಂದಿದೆ. ನಿಜ ಹೇಳಬೇಕು ಎಂದರೆ ನನ್ನ ಬಗ್ಗೆ ನನಗೆ ಅಸಹ್ಯ ಆಗಿದೆ. ಎಲ್ಲಿಂದಲೋ ಅವರು ಪ್ರೀತಿಯಿಂದ ಹರಸಿದರೆ ಸಾಕು. ಇದೇ ನಿಜವಾದ ಬರ್ತ್ಡೇ’ ಎಂದು ಯಶ್ ಹೇಳಿದ್ದಾರೆ.
‘10-15 ದಿನ ಮುಂಚೆ ಕೊವಿಡ್ ಅಂತ ಶುರು ಮಾಡಿದರು. ನಮ್ಮ ಬರ್ತ್ಡೇಯಿಂದ ಯಾರಿಗೂ ತೊಂದರೆ ಆಗಬಾರದು ಅಂತ ನಾನು ಈ ವರ್ಷ ಎಲ್ಲರ ಜೊತೆ ಆಚರಣೆ ಬೇಡ ಅಂತ ನಿರ್ಧರಿಸಿದೆ. ಬೇಡ ಎಂದರೂ ಅಭಿಮಾನಿಗಳು ಬೇಜಾರು ಮಾಡಿಕೊಳ್ಳುತ್ತಾರೆ. ಸಹಾಯ ಯಾರು ಬೇಕಾದರೂ ಮಾಡಬಹುದು. ಮನೆಗೆ ಮಗ ಬರುತ್ತಾನಾ? ಕುಟುಂಬದಲ್ಲಿ ಮಕ್ಕಳನ್ನು ಕಳೆದುಕೊಂಡವರು ಏನು ಹೇಳಲು ಸಾಧ್ಯ? ನಮ್ಮ ಮನೆಗಳಲ್ಲಿ ಸಾವಾದರೂ ಹಾಗೆ ಅಲ್ಲವೇ? ಆ ಹುಡುಗರು ಇನ್ನೂ ಚಿಕ್ಕ ವಯಸ್ಸಿನವರು’ ಎಂದಿದ್ದಾರೆ.
ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಬ್ಯಾನರ್ ಕಟ್ಟುವುದು, ಬೈಕ್ನಲ್ಲಿ ಚೇಸ್ ಮಾಡುವುದನ್ನೆಲ್ಲ ಬಿಟ್ಟು ಬಿಡಿ. ನಿಜವಾಗಿಯೂ ನೀವು ಪ್ರೀತಿ ತೋರಿಸಬೇಕು ಎಂದರೆ ಒಳ್ಳೆಯ ಕೆಲಸ ಮಾಡಿ ನಿಮ್ಮ ಜೀವನದಲ್ಲಿ ಖುಷಿಯಾಗಿರಿ. ಅದೇ ಸಾಕು. ನನ್ನ ಬಗ್ಗೆ ಬೇಜಾರು ಮಾಡಿಕೊಂಡರೂ ಪರವಾಗಿಲ್ಲ ಅಂತ ನಾನು ದೂರ ಇರುತ್ತೇನೆ. ಪ್ರತಿಯೊಬ್ಬ ಅಭಿಮಾನಿಯೂ ಅವರವರ ಬದುಕಿನಲ್ಲಿ ಬೆಳೆದರೆ ಅದೇ ನಮಗೆ ಅವರು ಅಭಿಮಾನ ತೋರಿಸಿದಂತೆ’ ಎಂದು ಯಶ್ ಹೇಳಿದರು.
ನಿನ್ನೆ ತಡರಾತ್ರಿ ಗ್ರಾಮದಲ್ಲಿ ಯಶ್ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಹನುಮಂತ ಹರಿಜನ (21), ಮುರಳಿ ನಡುವಿನಮನಿ (20), ನವೀನ್ ಗಾಜಿ (19) ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಮೃತ ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಯಶ್ ಆಗಮಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….