ನವದೆಹಲಿ, (ಜ.08): ಲಕ್ಷದ್ವೀಪಕ್ಕೆ ಭೇಟಿ ನೀಡಿ ಆಕರ್ಷಕ ಫೋಟೋಗಳನ್ನು ಬಿತ್ತರಿಸುವ ಮೂಲಕ ‘ಮಾಲ್ಡಿವ್‌ಗೆ ಲಕ್ಷದ್ವೀಪ ಪರ್ಯಾಯ ಪ್ರವಾಸಿ ತಾಣವಾಗಬಹುದು’ ಎಂಬ ಅಭಿಪ್ರಾಯ ಸೃಷ್ಟಿಯಾಗಲು ಕಾರಣರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೀಳು ಹೇಳಿಕೆ ನೀಡಿದ್ದಕ್ಕಾಗಿ 3 ಉಪ-ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಭಾನುವಾರ ಸಂಜೆ ಸಸ್ಪೆಂಡ್ ಮಾಡಿದೆ.
ಮಾರಿಯಂ ಶಿಯುನಾ, ಮಲ್ಲಾ ಷರೀಫ್ ಹಾಗೂ ಮಝೂಂ ಮಜೀದ್ ಅವರೇ ಸಸ್ಪೆಂಡ್ ಆದ 3 ಉಪ-ಸಚಿವರು.
ಮೋದಿ ಕುರಿತ ಅವರ ಟೀಕೆಗಳು ಉಭಯ ದೇಶಗಳ ನಡುವಿನ ಬಿಕ್ಕಟ್ಟಿಗೆ ಕಾರಣವಾದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು ನೇತೃತ್ವದ ಮಾಲ್ಡೀವ್ಸ್ ಸರ್ಕಾರ ಶಿಸ್ತು ಕ್ರಮ ಜರುಗಿಸಿದೆ. ಮಾಲ್ಡೀವ್ಸ್ ಸರ್ಕಾರದಲ್ಲಿ ಹಾಗೂ ಸ್ವತಃ ಮಾಲ್ಡೀವ್ಸ್ ನಾಗರಿಕರಿಂದಲೂ ಸಚಿವರ ನಡೆಗೆ ವಿರೋಧ ವ್ಯಕ್ತವಾಗಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವ ಹೇಳನ ಮಾಡಿ ಮಾಲ್ಡೀವ್ಸ್ ಸಚಿವೆ ಟ್ವಿಟ್ ಮಾಡಿರುವ ಬೆನ್ನಲ್ಲೇ ಮಾಲ್ಡೀವ್ಸ್ ಪ್ರವಾಸವನ್ನು ಭಾರತೀಯರು ರದ್ದು ಮಾಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣ ಗಳಲ್ಲಿ ‘ಬಾಯ್ಕಾಟ್ ಮಾಲ್ಡೀವ್ಸ್’ (ಮಾಲ್ಡೀವ್ಸ್‌ಗೆ ಬಹಿಷ್ಕಾರ ಹಾಕಿ) ಎಂಬುದು ಟ್ರೆಂಡ್ ಆಗಿದೆ.
ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿರುವ ಸ್ಕ್ರೀನ್ ಶಾಟ್‌ಗಳನ್ನು ಹಲವು ಜನ ತಮ್ಮ ಸಾಮಾಜಿಕ ಜಾಲ ತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭಾರತವು ಆತ್ಮನಿರ್ಭರವಾಗಬೇಕು. ಮಾಲ್ಡೀವ್ಸ್‌ಗೆ ಹೋಗದೇ ಅವರಿಗೆ ತಿರುಗೇಟು ನೀಡಬೇಕು ಎಂಬ ಸಂದೇಶಗಳು ಹರಿದಾಡುತ್ತಿವೆ.
ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರತೀಯ ಪ್ರವಾಸಿಗಳ ಪಾಲೇ ಅಧಿಕವಾಗಿದೆ. ಇತ್ತೀಚಿನ ಕೆಲವು ದಿನಗಳಿಂದ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿತ್ತು. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ, ಮಾಲೀವ್ ನಾಯಕರು ಭಾರತದ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….