ಬೆಂಗಳೂರು, (ಜ.08): ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಸಚಿವರಿಗೆ ಮುಖ್ಯಮಂತ್ರಿ ಕರೆದು ಬುದ್ದಿ ಹೇಳಲಿ ಎಂದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದು ಎಂದೋ ಮುಗಿದು ಹೋಗಿರುವ ವಿಷಯ. ಅದನ್ನು ಮತ್ತೆ ಮತ್ತೆ ಕೆಣಕುವ ಅಗತ್ಯ ಏನಿದೆ? ಬಹುಶಃ ಅವರಿಗೆ ಮಹಾರಾಷ್ಟ್ರದ ವ್ಯಾಮೋಹದಿಂದ ಹೊರಬರಲು ಸಾಧ್ಯವಿಲ್ಲ, ನೆರೆ ರಾಜ್ಯದ ಮೇಲೆ ಅವರಿಗೆ ವ್ಯಾಮೋಹ ಜಾಸ್ತಿ ಅಂತ ಕಾಣುತ್ತದೆ ಎಂದು ಕಿಡಿಕಾರಿದರು.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಸಚಿವರೇ ಇಂತಹ ಅನಗತ್ಯ, ವಿವಾದಾಸ್ಪದ ವಿಷಯಗಳನ್ನು ಮಾತಾಡಿದರೆ ನೀವೇ ನೀರು ಎರೆದ ಹಾಗೆ ಅಲ್ಲವಾ? ಸಿಎಂ ಅವರಿಗೆ ಮಂತ್ರಿಗಳ ಮೇಲೆ ಹಿಡಿತ ಇದ್ದರೆ ಅವರನ್ನು ಕರೆದು ಸರಿಯಾಗಿ ಬುದ್ದಿ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯ ಮಾಡಿದರು.
ಈ ಮಂತ್ರಿಗಳಿಗೆ ಗ್ಯಾರಂಟಿ ಹೆಸರಲ್ಲಿ ಸರಕಾರ ರಚನೆ ಮಾಡಿರುವುದರಿಂದ ಯಾವುದೇ ಅಭಿವೃದ್ಧಿ ರಾಜ್ಯದಲ್ಲಿ ಕಾಣುತ್ತಿಲ್ಲ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದರು ಮಾಜಿ ಮುಖ್ಯಮಂತ್ರಿಗಳು.
8 ತಿಂಗಳು ಆಗಿದೆ ಸರಕಾರ ಬಂದು. ಬರ ಪರಿಹಾರ ವಿಚಾರದಲ್ಲಿ ಸರಕಾರ ಹೇಗೆ ನಡೆದುಕೊಳ್ಳುತಿದೆ ಎನ್ನುವುದನ್ನು ಜನ ನೋಡುತ್ತಿದ್ದಾರೆ. 2 ಸಾವಿರ ಹಣ ಕೊಡಲು 105 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಅದು ಎಷ್ಟು ಜನರಿಗೆ ಹೋಗುತ್ತದೆ. ಬರದಿಂದ 30 ಸಾವಿರ ಕೋಟಿ ನಷ್ಟ ಆಗಿದೆ ಅಂತ ಹೇಳಿ 105 ಕೋಟಿ ಬಿಡುಗಡೆ ಮಾಡಿದರೆ ಸಾಕಾ? ಇಷ್ಟು ಹಣದಿಂದ ಯಾವ ಪುರುಷಾರ್ಥ ಸಾಧಿಸುತ್ತಾರೆ? ರೈತರನ್ನ ಬದುಕಿಸೋಕೆ ಸಾಧ್ಯನಾ? ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದರು.
ಮಾಜಿ ಸಚಿವ ಬಂಡೆಪ್ಪ ಕಾಶೇಂಪೂರ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….