ಒಂದು ಸಲ ಅಕ್ಕಿ ಮತ್ತು ರಾಗಿಗೆ ಜಗಳ ಬಂದಿತು. ಅಕ್ಕಿಯು, ನಾನು ಬೆಳ್ಳಗಿರುವೆ, ನೀನು ತುಂಬಾ ಕಪ್ಪು ಎಂದು ರಾಗಿಗೆ ಹೇಳಿತು. ಅದಕ್ಕೆ ರಾಗಿ ನನ್ನಷ್ಟು ಶಕ್ತಿವಂತ ಆಹಾರ ನೀನಲ್ಲ. ನಿನಗೆಲ್ಲಿದೆ ಶಕ್ತಿ ಎಂದು ರಾಗಿ ಜೋರಾಗಿ ಕೇಳಿತು.
ಆಗ ಅಕ್ಕಿ ಜಂಬದಿಂದ, “ಹೋಗಾಚೆ ನನ್ನ ಬಿಳಿಯ ಬಣ್ಣದ ಮುಂದೆ ನಿನ್ನ ಶಕ್ತಿ ಯಾವ ಲೆಕ್ಕವೂ ಅಲ್ಲ” ಎಂದು ಮೂತಿ ತಿರುಗಿಸಿ ಹೇಳಿತು. ನನ್ನನ್ನು ಆಹಾರವಾಗಿ ಸೇವಿಸುವ ರೈತರು ಮಳೆ ಚಳಿ ಬಿಸಿಲಿನಲ್ಲೂ ಶಕ್ತಿವಂತರಾಗಿದ್ದು, ಕೆಲಸಗಳನ್ನು ಮಾಡುತ್ತಾರೆ, ಎಂದು ರಾಗಿ ಹೇಳಿದರೆ, ಅಕ್ಕಿ ಒಪ್ಪಲಿಲ್ಲ ,ರಾಗಿ ಸೋಲಲಿಲ್ಲ, ನಾ ಬಿಡೆ, ನೀ ಕೊಡೆ ಎಂಬಂತೆ ಎರಡರ ಜಗಳವೂ ತಾರಕಕ್ಕೇರಿತ್ತು.
ಜಗಳ ಬಗೆಹರಿಯದೆ, ಎರಡೂ ಯಾರು ಹೆಚ್ಚು ಎಂದು ಕೇಳಲು ಶ್ರೀರಾಮನ ಆಸ್ಥಾನಕ್ಕೆ ಬಂದವು. ಆಗ ರಾಮನು ಕಲಾಪದಲ್ಲಿದ್ದು, ಭಟರನ್ನು ಕರೆದು ಈ ದಿನ ಸಮಯವಿಲ್ಲ ಅಕ್ಕಿ ಮತ್ತು ರಾಗಿಯನ್ನು ಕೋಣೆಯಲ್ಲಿ ಇಟ್ಟುಬಿಡಿ ಎಂದು ಹೇಳಿದನು. ಸೇವಕರು ರಾಗಿ ಮತ್ತು ಅಕ್ಕಿಯನ್ನು ಕೋಣೆಯಲ್ಲಿ ಹಾಕಿ ಬೀಗ ಹಾಕಿದರು. ರಾಮನ ಕಾರ್ಯಕಲಾಪ ಆಶಾಡ ಮಾಸದ ಜೋರು ಮಳೆಯಲ್ಲಿ ಮುಗಿಯಿತು. ಅಲ್ಲಿಯ ತನಕವೂ ಅಕ್ಕಿ ಮತ್ತು ರಾಗಿ ಚಳಿ ಮತ್ತು ಥಂಡಿಯಲ್ಲಿ ಕಾಲ ಕಳೆಯಬೇಕಾಯಿತು.
ಅಂದು ತೀರ್ಪು ಹೇಳಲು ರಾಮನು ಸಭೆ ಕರೆದನು. ಸೇವಕರಿಗೆ ರಾಗಿ ಮತ್ತು ಅಕ್ಕಿಯನ್ನು ಹೊರಗೆ ಬಿಡಲು ಹೇಳಿದನು. ಸೇವಕರು ಹೋಗಿ ಕೋಣೆ ಬಾಗಿಲು ತೆರೆಯುತ್ತಲೇ ರಾಗಿ ನುಗ್ಗಿ ಓಡಿ ಬಂದಿತು. ನಿಶ್ಯಕ್ತಿಯಾಗಿದ್ದ ಅಕ್ಕಿ ಸಾಗಲಾರದೆ ಬಂದಿತು.
ರಾಗಿ ಕಾಳುಗಳು ಚುರುಕಾಗಿದ್ದು ಬುಡುಬುಡನೆ ಉರುಳುತುರುಳುತಾ ಓಡೋಡಿ ಬಂದು, ಶ್ರೀರಾಮನ ಪದತಲದಲ್ಲಿ ಶಿರಬಾಗಿ ಭಕ್ತಿಯಿಂದ ಬೆಚ್ಚಗೆ ಕುಳಿತವು. ಮಳೆ ಥಂಡಿಯಿಂದಾಗಿ ಅಕ್ಕಿ ಮುಗ್ಗಲಾಗಿ, ಮಾಲುಗಟ್ಟಿ ಅದರ ಬಣ್ಣವೆಲ್ಲ ಬೂದಿ ಬಳಿದಂತೆ ಮಾಸಿತ್ತು. ಮೈಯಲ್ಲಿ ಶಕ್ತಿ ಇಲ್ಲದೆ ನಡೆಯಲು ಸಾಗದೆ, ಕಳೆಗುಂದಿದ ಮುಖದಿಂದ, ತೊಡರುಗಾಲು ಹಾಕುತ್ತಾ ಸೊಟ್ಟ್ ಸೊಟ್ಟಗೆ, ವಾಲಾಡುತ್ತ ಬರುತ್ತಿದ್ದವು.
ಸಿಂಹಾಸನದಲ್ಲಿ ಕುಳಿತು, ಕಲಾಪ ನಡೆಸುತ್ತಿದ್ದ ರಾಮನು, ಅಕಸ್ಮಾತ್ ಕೆಳಗೆ ನೋಡಿದನು. “ನಗುನಗುತ್ತಾ ಕುಳಿತಿದ್ದ ರಾಗಿಯನ್ನು ಕಂಡನು. ರಾಮನಿಗೆ ಖುಷಿಯಾಯಿತು.”ನಿಮಗೆ ಏನು ಬೇಕು? ಒಂದು ವರವನ್ನು ಕೊಡುತ್ತೇನೆ ಕೇಳಿರಿ ಎಂದನು.
ರಾಗಿ ಕಾಳುಗಳು, ” ನಿನ್ನ ನಾಮ ವಿನಹ, ನಮಗೆ ಬೇರೆ ಯಾವ ವರವೂ ಬೇಡ” ಎಂದವು. ರಾಮನು ಸಂತೋಷಗೊಂಡು, ಇಂದಿನಿಂದ ನೀವು ‘ರಾಮಧಾನ್ಯ’ ವಾಗಿ ಪ್ರಸಿದ್ಧಿಯಾಗಿರಿ, ಎಂದು ರಾಗಿಗೆ ಹರಸಿದನು. ಅಂದಿನಿಂದ ರಾಗಿ ‘ರಾಮಧಾನ್ಯ’ ವಾಗಿ ಪ್ರಸಿದ್ಧಿ ಹೊಂದಿತು. ಬಡವರಿಗೆ ಹಸಿವು ತಣಿಸಿತು. ಶ್ರೀಮಂತರಿಗೆ ಪಥ್ಯದ ಆಹಾರವಾಯಿತು. ರೈತರಿಗೆ ಮಿತ್ರನಾಗಿ ಆಪ್ತ ಬಂಧು ವಾಯಿತು.
“ರಾಗಿ ತಂದಿರಾ ಭಿಕ್ಷಕೆ ರಾಗಿ ತಂದೀರಾ, ಯೋಗ್ಯರಾಗಿ ,ಭೋಗ್ಯರಾಗಿ ಭಾಗ್ಯವಂತರಾಗಿ ನೀವು, ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ.”
ಅನ್ನದಾನವ ಮಾಡುವರಾಗಿ, ಅನ್ನಛತ್ರವನಿಟ್ಟವರಾಗಿ,
ಅನ್ಯ ವಾರ್ತೆಯ ಬಿಟ್ಟವರಾಗಿ, ಅನುದಿನ ಭಾಜನೆಯ ಮಾಡುವವರಾಗಿ.
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ!
ಸಿರಿರಮಣನ ಸದಾ ಸ್ಪರ್ಧಿಸುವುದಾಗಿ, ಗುರುತಿಗೆ ಬಾಹೋರಂಥವರಾಗಿ,
ಕರೆ ಕರೆ ಸಂಸಾರವ ನೀಗುವರಾಗಿ, ಪುರಂದರ ವಿಠಲನ ಸೇವಿಪರಾಗಿ,
ರಾಗಿ ತಂದಿರಾ ಭಿಕ್ಷಕೆ ರಾಗಿ ತಂದೀರಾ!”
ಸಂಗ್ರಹ ವರದಿ; ಗಣೇಶ್, ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….