ಚಿಕ್ಕಬಳ್ಳಾಪುರ, (ಫೆ.16): ಗೌರಿಬಿದನೂರು ಸಕ್ಕರೆ ಕಾರ್ಖಾನೆಯ ವಿರುದ್ಧ ಸಕ್ಕರೆ ಕಾರ್ಖಾನೆ ಕಾರ್ಮಿಕ ಸಂಘವು ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಅದರಂತೆ ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೂ ಕಾರ್ಖಾನೆಯು ಅಲ್ಲಿನ ಸ್ಕ್ರಾಪ್ ಗಳನ್ನು ಮಾರಾಟ ಮಾಡಬಾರದೆಂದು ಸಕ್ಕರೆ ಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಎಸ್.ಮೋಹನ್ ಆಗ್ರಹಿಸಿದ್ದಾರೆ.
ಗೌರಿಬಿದನೂರಿನ ಸಕ್ಕರೆ ಕಾರ್ಖಾನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್.ಮೋಹನ್,ಕಾರ್ಖಾನೆಯ ಯಾವುದೇ ವಸ್ತುಗಳನ್ನು ಮಾರಾಟ, ಸಾಗಾಣಿಕೆ ಮಾಡುವುದಾಗಲಿ ಮಾಡಬಾರದೆಂಬ ಸರ್ವೋಚ್ಚ ನ್ಯಾಯಾಲಯದ ಆದೇಶ ವಿದ್ದರೂ ಸಹ ಕಾರ್ಖಾನೆಯ ಸ್ಕ್ರಾಪ್ ಗಳನ್ನು ಲಾರಿಗಳಲ್ಲಿ ಸಾಗಿಸಲು ಪ್ರಯತ್ನಿಸಲಾಗಿದ್ದು ನಮ್ಮ ಕಾರ್ಮಿಕ ಸಂಘದ ಸದಸ್ಯರು ಇದನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದರು.
ಈ ಹಿಂದೆ ನಾವು ಪ್ರತಿಭಟನೆ ನಡೆಸಿದಾಗ ಮಾಜಿ ಶಾಸಕಿ ಎನ್ .ಜ್ಯೋತಿ ರೆಡ್ಡಿ ಹಾಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ರವರು ಸ್ಥಳಕ್ಕೆ ಬಂದು ಸಂಬಂಧಪಟ್ಟ ಕಾರ್ಖಾನೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಪೂರ್ಣಗೊಳ್ಳುವವರೆಗೂ ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದಾಗಲಿ ಸಾಗಿಸುವುದಾಗಲಿ ಮಾಡಬಾರದೆಂದು ಕಾರ್ಮಿಕರು ಪ್ರತಿಭಟನೆಯೂ ನಡೆಸುತ್ತಿದ್ದಾರೆ. ಆದರೂ ಗುಜರಾತ್ ಮೂಲದ ಮಹದೇವ್ ಎಂಟರ್ಪ್ರೈಸಸ್ ನ ಅಶ್ವಿನ್ ಎಂಬುವವರು ಬುಧವಾರ ಬೆಳಗ್ಗೆ ಲಾರಿಯ ಸಮೇತ ಬಂದು ಸಕ್ಕರೆ ಕಾರ್ಖಾನೆ ಒಳಗೆ ಇರುವ ಕಬ್ಬಿಣದ ಸ್ಕ್ರಾಪ್ ಗಳನ್ನು ತೆಗೆದುಕೊಂಡು ಹೋಗಲು ಮುಂದಾದ ಸಮಯದಲ್ಲಿ ಲಾರಿಯನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು ಎಂದು ತಿಳಿಸಿದರು.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….