ಬೆಂಗಳೂರು, (ಫೆ, 16); ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 15 ನೇ ದಾಖಲೆಯ ಬಜೆಟ್ ರಾಜ್ಯಕ್ಕೆ ಕೇಂದ್ರದಿಂದ ಉಂಟಾಗಿರುವ ತೆರಿಗೆ ಹಂಚಿಕೆ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಿದೆ. ಕರ್ನಾಟಕದ ಏಳು ಕೋಟಿ ಜನರಿಗೆ ಕೇಂದ್ರದ ತಾರತಮ್ಯದ ವಿರುದ್ಧ ಹೋರಾಟ ಮಾಡಲು ಶಕ್ತಿ ನೀಡಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
2024 – 25 ನೇ ಸಾಲಿನ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದೆಹಲಿಯ ಜಂತರ್ ಮಂತರ್ ನಲ್ಲಿ ಕೇಂದ್ರದ ವಿರುದ್ಧ ಹೋರಾಟ ಮಾಡಿದ ನಂತರ ಬಿಜೆಪಿಯ ಜಂಘಾಬಲ ಉಡಗಿ ಹೋಗಿದೆ. ರಾಜ್ಯ ಬಿಜೆಪಿ ನಾಯಕರು ಬಜೆಟ್ ಭಾಷಣದ ಕಲಾಪದಿಂದ ದೂರ ಸರಿದು ಪ್ರತಿಭಟನೆ ಮಾಡುವ ಹಂತಕ್ಕೆ ತಲುಪಿರುವುದು ಬಿಜೆಪಿಯ ದಿವಾಳಿತನವನ್ನು ತೋರಿಸುತ್ತದೆ.
ಬಜೆಟ್ ಅಂಕಿ ಅಂಶಗಳ ಕುರಿತು ವಿಧಾನಮಂಡದಲ್ಲಿ ಚರ್ಚೆ ಮಾಡುವ ಬದಲು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂಭಾಗ ಘೋಷಣೆ ಕೂಗಿರುವುದನ್ನು ನೋಡಿದರೆ ಇವರಿಗೆ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಕಾಳಜಿ ಇಲ್ಲ. ಇದು ಬಿಜೆಪಿ ನಾಯಕರ ಪಲಾಯನವಾದವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಡಬಲ್ ಇಂಜಿನ್ ಎಂದು ಹೇಳಿಕೊಳ್ಳುತ್ತಿದ್ದ ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯಕ್ಕೆ 11,495 ಕೋಟಿ ರೂ.ಗಳ ವಿಶೇಷ ಅನುದಾನ ಕೈತಪ್ಪಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರಾಜ್ಯದ ಹಿತ ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದು, ತನ್ನ ಅಸಮರ್ಥತೆಯನ್ನು ಪ್ರದರ್ಶಿಸಿದೆ.
ತೆರಿಗೆ ಹಂಚಿಕೆಯಲ್ಲಿ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಿ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವುದು ಬಜೆಟ್ ಅಂಕಿ ಅಂಶಗಳು ಸಾಬೀತುಪಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಪ್ರಜಾತಂತ್ರ ಮಾರ್ಗದಲ್ಲಿ ಅಂಕಿ ಅಂಶಗಳೊಂದಿಗೆ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸುವುದಾಗಿ ಘೋಷಿಸಿದ್ದು, ರಾಜ್ಯದ ತನ್ನ ಪಾಲು ಪಡೆಯುವ ನಿಟ್ಟಿನಲ್ಲಿ ಅವರು ಇಟ್ಟಿರುವ ಮಹತ್ವದ ಹೆಜ್ಜೆ ಎಂದು ಎಂ.ಎಸ್. ರಕ್ಷಾ ರಾಮಯ್ಯ ಬಣ್ಣಿಸಿದ್ದಾರೆ.
ಸಿದ್ದರಾಮಯ್ಯ ದೇಶದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳ ಸಾಲಿನಲ್ಲಿ ಮೊದಲಿಗರಾಗಿದ್ದಾರೆ. ಪ್ರತಿಯೊಂದು ಬಜೆಟ್ ನಲ್ಲೂ ಅವರು ಪಕ್ವತೆಯನ್ನು ಕಾಯ್ದುಕೊಂಡು ಬರುತ್ತಿದ್ದು, ಹಿಂದಿನ 14 ಬಜೆಟ್ ಗಳಿಗೆ ಹೋಲಿಸಿದರೆ ಈ ಬಜೆಟ್ ಅತ್ಯಂತ ದಿಟ್ಟತನದಿಂದ ಕೂಡಿದೆ. “ನಮ್ಮ ತೆರಿಗೆ – ನಮ್ಮ ಹಕ್ಕು” ಹೋರಾಟಕ್ಕೆ ಈ ಬಜೆಟ್ ಮತ್ತೊಂದು ಹೊಸ ಆಯಾಮ ನೀಡಿದೆ ಎಂದು ಎಂದರು.
ರಾಜ್ಯದ ಎಲ್ಲಾ ಭಾಗಗಳು, ಎಲ್ಲಾ ಜನಾಂಗಗಳಿಗೆ ಆದ್ಯತೆ ನೀಡಲಾಗಿದೆ. ಹಿಂದುಳಿದ ಜನಾಂಗದ ಶ್ರೇಯೋಭಿವೃದ್ಧಿ, ಶಿಕ್ಷಣ, ಕೃಷಿ, ಆರೋಗ್ಯ ಕ್ಷೇತ್ರಗಳಿಗೆ ಮುಖ್ಯಮಂತ್ರಿಯವರು ವಿಶೇಷ ಒತ್ತು ನೀಡಿದ್ದಾರೆ. ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುವ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ಮುನ್ನೋಟ ನೀಡುವ ಬಜೆಟ್ ಇದಾಗಿದೆ.
ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ ಎಂಬುದನ್ನು ಬಜೆಟ್ ನಿರೂಪಿಸಿದೆ. ಐದು ಗ್ಯಾರಂಟಿಗಳ ಜಾರಿಯಿಂದ ಇಡೀ ಜಗತ್ತು ರಾಜ್ಯದತ್ತ ನೋಡುವಂತಾಗಿದೆ. ಬಿಜೆಪಿ ನಾಯಕರ ಹಸಿ ಸುಳ್ಳುಗಳಿಗೆ ಮುಖ್ಯಮಂತ್ರಿಯವರು ತಕ್ಕ ಉತ್ತರ ನೀಡಿದ್ದಾರೆ ಎಂದು ಎಸ್. ರಕ್ಷಾ ರಾಮಯ್ಯ ವಿಶ್ಲೇಷಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….