ದೊಡ್ಡಬಳ್ಳಾಪುರ, (ಫೆ.16); ತಾಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ 43ನೇ ವಾರ್ಷಿಕ ಮಹಾ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ವಿವಿದೆಡೆಗಳಿಂದ ಆಗಮಿಸಿದ್ದ ಸಾವಿರಾರು ಜನ ಭಾಗವಹಿಸಿ, ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.
ರಥೋತ್ಸವದಲ್ಲಿ ಭಾಗವಹಿಸಿದ್ದ ವೀರಗಾಸೆ ಕುಣಿತ, ಕಂಸಾಳೆ ಹಾಗೂ ಡೊಳ್ಳು ಕುಣಿತಗಳು ಮೆರುಗು ನೀಡಿದವು.
ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೂ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ದರ್ಶನ ಪಡೆದರು. ದೇವಾಲಯದಲ್ಲಿ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಥೋತ್ಸವದ ಅಂಗವಾಗಿ ಗುರುವಾರ ಸಂಜೆ ಉಯ್ಯಾಲೋತ್ಸವ, ಅಗ್ನಿಕೊಂಡ, ಅಕ್ಕಿಪೂಜೆ ಹಾಗೂ ದೀಪಾರಾಧನೆ ಕಾರ್ಯಕ್ರಮಗಳು ನಡೆದವು.
ರಾತ್ರಿ ಕಸಾಘಟ್ಟದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ತ್ರಿಪುರ ಸಂಹಾರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನೆ ನೀಡಿ, ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕಾಗಿದೆ. ಧಾರ್ಮಿಕ ಭಾವನೆಗಳು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ದೇವರು, ಧರ್ಮಗಳ ಬಗ್ಗೆ ಇಂದಿನ ಪೀಳಿಗೆ ಶ್ರದ್ದೆ ಹೊಂದಬೇಕು. ಜಾತ್ರೆಉತ್ಸವಗಳು ಎಲ್ಲ ಜಾತಿ, ವರ್ಗದ ಜನರು ಒಂದೆಡೆ ಸೇರಲು ಉತ್ತಮ ಅವಕಾಶವನ್ನು ಕಲ್ಪಿಸುತ್ತವೆ ಎಂದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸಹೋದರರಿಂದ ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….