ಬೆಂಗಳೂರು, (ಮೇ.31); ಒಂದು ತಿಂಗಳಿಗೂ ಅಧಿಕ ಕಾಲ ಕಣ್ಣಾಮುಚ್ಚಾಲೆ ಆಟ ಆಡಿ ಅಂತೂ ಬೆಂಗಳೂರಿಗೆ ಬಂದಿರುವ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದು ಕೋರ್ಟ್ ಜೂನ್ 6ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ , ಅತ್ಯಾಚಾರ ಕೇಸ್ ಸಂಬಂಧ ಕಳೆದ ರಾತ್ರಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ನನ್ನ ಬಂಧಿಸಿದ್ದು, ಆರೋಗ್ಯ ತಪಾಸಣೆ ಬಳಿಕ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಎದುರು ಹಾಜರುಪಡಿಸಲಾಗಿದೆ.
ಎಸ್‌ಐಟಿ ಪರ ಎಸ್‌ಪಿಪಿ ಅಶೋಕ್ ನಾಯಕ್ ಹಾಗೂ ತನಿಖಾಧಿಕಾರಿ ಸುಮನಾ ಪೆನ್ನೇಕರ್, ಪ್ರಜ್ವಲ್ ಪರ ವಕೀಲ ಅರುಣ್ ಕೋರ್ಟ್‌ಗೆ ಹಾಜರಾಗಿದ್ದರು.
ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ 15 ದಿನ ಕಸ್ಟಡಿಗೆ ಕೇಳಿ ರಿಮ್ಯಾಂಡ್ ಅರ್ಜಿಯನ್ನು ಸಲ್ಲಿಸಿತ್ತು,. ಪ್ರಜ್ವಲ್ ಮೇಲೆ ಅತ್ಯಾಚಾರ ಆರೋಪ, ಹಾಗೇ ಅಶ್ಲೀಲ ವಿಡಿಯೋ ರೆಕಾರ್ಡ್ ವಿಚಾರವನ್ನೂ ಪ್ರಸ್ತಾಪಿಸಿದ ಎಸ್‌ಐಟಿ ಪರ ಎಸ್‌ಪಿಪಿ ಇನ್ನೂ ಹಲವು ಸಂತ್ರಸ್ತರು ದೂರು ದಾಖಲಿಸುವ ಸಾಧ್ಯತೆ ಇದೆ, ಜೊತೆಗೆ ವಿದೇಶಕ್ಕೆ ಹೋಗುವ ಹಿಂದೆ ಹಲವರ ಕೈವಾಡವಿದೆ. ಇವೆಲ್ಲಾ ವಿಚಾರಣೆಯಾಗಬೇಕು, ಮೊಬೈಲ್‌ನಲ್ಲಿನ ಡೇಟಾಗಳ ಬಗ್ಗೆಯೂ ತನಿಖೆಯಾಗಬೇಕು ಹೀಗಾಗಿ ಕಸ್ಟಡಿಗೆ ಬೇಕು ಎಂದು ಕೇಳಿದ್ದಾರೆ.
ಇನ್ನು ಪ್ರಜ್ವಲ್ ಪರ ವಾದ ಮಂಡಿಸಿದ ವಕೀಲ ಅರುಣ್, ಕೇಸ್ ದಾಖಲಿಸಿದ ಸಂತ್ರಸ್ತೆ ಅತ್ಯಾಚಾರದ ಬಗ್ಗೆ 4 ವರ್ಷದ ಹಿಂದೆ ದೂರು ನೀಡಿರಲಿಲ್ಲ ಇದು ಹಳೆಯ ಕೇಸ್, ಹಾಗೆ ಆಕೆಯ ಯಾವುದೇ ವಿಡಿಯೋ ರೆಕಾರ್ಡ್ ಆಗಿಲ್ಲ. ಸಿಆರ್‌ಪಿಸಿ 161 ಹೇಳಿಕೆ ಬಳಿಕ ಅತ್ಯಾಚಾರ ದೂರು ದಾಖಲಾಗಿದೆ.
ದೌರ್ಜನ್ಯ ಕೇಸ್‌ನ್ನು ಅತ್ಯಾಚಾರ ಕೇಸ್‌ನ್ನಾಗಿ ಮಾಡಲಾಗಿದೆ. 15 ದಿನ ಕಸ್ಟಡಿ ಅವಶ್ಯಕತೆ ಇಲ್ಲ, ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ನ್ಯಾಯಯುತವಾಗಿಲ್ಲ ಎಂದು ವಕೀಲ ಅರುಣ್ ವಾದ ಮಂಡಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….