ಬೆಂಗಳೂರು, (ಜೂ.02): ಕರಗದ ಪಲ್ಲಕ್ಕಿ ಉತ್ಸವ ಮುಗಿಸಿಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಮೃತರನ್ನು ಜಿಗಣಿಯ ಯಾರಂಡಹಳ್ಳಿ ಹರಿಬಾಬು (25 ವರ್ಷ) ಹಾಗೂ ವೀರಸಂದ್ರದ ರಂಗನಾಥ್(30 ವರ್ಷ) ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ಹೆಬ್ಬಗೋಡಿ ಸಮೀಪದ ಗೊಲ್ಲಹಳ್ಳಿಯಲ್ಲಿ ಕರಗ ಉತ್ಸವ ನಡೆದಿತ್ತು. ರಾತ್ರಿ ಕರಗ ಉತ್ಸವಕ್ಕೆ ಪಲ್ಲಕ್ಕಿಗಳು ಆಗಮಿಸಿತ್ತು. ಇಂದು ಬೆಳಗ್ಗೆ ಪಲ್ಲಕ್ಕಿ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಪಲ್ಲಕ್ಕಿ ಸಾಗುವ ಮಾರ್ಗ ಮಧ್ಯೆ ವಿದ್ಯುತ್ ತಂತಿಯೊಂದು ಇದ್ದು, ಟ್ರಾಕ್ಟರ್‌ನಲ್ಲಿ ಹೋಗುತ್ತಿದ್ದಾಗ ಒಬ್ಬ ಯುವಕ ಮರದ ಕೋಲಿನಿಂದ ವಿದ್ಯುತ್ ತಂತಿಯನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಶಾಕ್ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿ ಅಗ್ನಿಶಾಮಕ ಠಾಣೆ ಸಮೀಪವೇ ದುರ್ಘಟನೆ ನಡೆದಿದ್ದು, ಘಟನೆ ನಡೆಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಹೊತ್ತಿ ಉರಿಯುತ್ತಿದ್ದ ಟ್ರ್ಯಾಕ್ಟರ್ ನಲ್ಲಿ ಬೆಂಕಿ ಆರಿಸಿದ್ದಾರೆ.
ಶನಿವಾರ ಮಳೆ ಆಗಿದ್ದರಿಂದ ಮರದ ಕೋಲು ಒದ್ದೆ ಆಗಿತ್ತು. ವಿದ್ಯುತ್ ಲೈನಿನಲ್ಲೂ ನೀರು ಒಣಗಿರಲಿಲ್ಲ. ಇದರಿಂದ ಶಾಕ್ ಹೊಡೆದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….