ದೊಡ್ಡಬಳ್ಳಾಪುರ, (ಜುಲೈ.12); ನಾಡು, ನುಡಿ ಜಲ ಜನರ ಸಮಸ್ಯೆಗಳಿಗೆ ಸದಾ ಕಾಳಜಿ ಹೊಂದಿರುವ ಕನ್ನಡ ಪಕ್ಷಕ್ಕೆ ಸದಸ್ಯರಾಗಲು ಆಹ್ವಾನಿಸಲಾಗುತ್ತಿದ್ದು, ಜು.14ರಂದು ನಡೆಯಲಿರುವ ಕನ್ನಡ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ, ಅಭಿಯಾನ ಯಶಸ್ವಿಗೊಳಿಸಬೇಕಿದೆ ಎಂದು ಕನ್ನಡ ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ.
ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಕನ್ನಡ ಪಕ್ಷದ ಹಿರಿಯ ಮುಖಂಡ ಸಂಜೀವ್ ನಾಯಕ್, ಕನ್ನಡ ಪಕ್ಷ ಸ್ಥಾಪನೆಯಾಗಿ 52 ವರ್ಷಗಳಾಗಿವೆ. ತಾಲೂಕಿನಲ್ಲಿ ಈ ಪ್ರಾದೇಶಿಕ ಪಕ್ಷ 35 ವರ್ಷಗಳಿಂದ ಸಕ್ರಿಯವಾಗಿ, ಜನರ ಸಮಸ್ಯೆಗಳಿಗೆ ಸ್ಪಂಸುತ್ತಲೇ ಬಂದಿದೆ. ಪಕ್ಷವನ್ನು ಬೆಳೆಸುವಲ್ಲಿ ಡಾ.ವೆಂಕಟರೆಡ್ಡಿ ಅವರ ಕೊಡುಗೆ ಅಪಾರವಾಗಿದೆ.
ಈಗ ಪಕ್ಷವನ್ನು ಬಲಿಷ್ಟಗೊಳಿಸಲು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಪಕ್ಷದಿಂದ ಅಭ್ಯರ್ಥಿಯನ್ನಾಗಿಸಲು ಚಿಂತಿಸಲಾಗಿದೆ. ನಾಡು ನುಡಿಯ ಚಿಂತನೆ ಇರುವವರು, ರೈತಪರ ಸಂಘಟನೆಗಳು, ಕನ್ನಡ ಪಕ್ಷದ ಬಗ್ಗೆ ಕಾಳಜಿ ಹೊಂದಿರುವವರು ಹಾಗೂ ಹಿಂದೆ ಕನ್ನಡ ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ಹೋಗಿರುವವರು ಪ್ರಾಮಾಣಿಕವಾಗಿ ಸಹ ಮತ್ತೆ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ.
ಮುಂದಿನ 4 ವರ್ಷಗಳಲ್ಲಿ ಪಕ್ಷವನ್ನು ಬಲಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಮುಖಂಡರಾದ ಡಿ.ಪಿ.ಆಂಜನೇಯ ಮಾತನಾಡಿ, ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಈ ಅಭಿಯಾನದಲ್ಲಿ ಎಲ್ಲಾ ರೈತರು, ದಲಿತರು, ಹಿಂದುಳಿದವರು, ಮಹಿಳೆಯರು , ವಿದ್ಯಾರ್ಥಿಗಳು ಎಲ್ಲಾ ರೀತಿಯ ಚಳವಳಿಗಳಲ್ಲಿ ಭಾಗವಹಿಸುವವರು ರಾಜಕೀಯ ಪಕ್ಷ ಎಂದು ಭಾವಿಸದೇ ಸದಸ್ಯತ್ವ ಪಡೆದುಕೊಳ್ಳಬೇಕು. ಕನ್ನಡ ಪಕ್ಷದಲ್ಲಿದ್ದ ಹಲವಾರು ಮುಖಂಡರು ಇಲ್ಲಿ ಎಲ್ಲಾ ಅನುಕೂಲಗಳನ್ನು ಪಡೆದು ಇಂದು ಬೇರೆ ಪಕ್ಷಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈತ ಸಂಘ, ದಲಿತ ಸಂಘಟನೆಗಳು ಮೊದಲಾದ ಸಂಘಟನೆಗಳ ಚಳವಳಿಗಳಿಗೆ ನಮ್ಮ ಬೆಂಬಲವಿದ್ದು, ಕನ್ನಡ ಪಕ್ಷದ ಸದಸ್ಯತ್ವ ಪಡೆದುಕೊಳ್ಳಬೇಕಿದೆ. ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕನ್ನಡ ಪಕ್ಷದಿಂದ ಸ್ರ್ಪಸಲು ಅವಕಾಶ ನೀಡಲಾಗುವುದು. ನಿಮ್ಮ ಸಂಘಟನೆಗಳಿಗೆ ನಮ್ಮ ಬೆಂಬಲವಿರುತ್ತದೆ ಎಂದರು.
ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕನ್ನಡ ಪಕ್ಷ ಬಲಿಷ್ಟವಾಗಬೇಕು. ಜನರ ಸಮಸ್ಯೆಗಳು ಬಗೆಹರಿಯಬೇಕು. ಈ ದಿಸೆಯಲ್ಲಿ 31 ವಾರ್ಡ್‍ಗಳಲ್ಲಿನ ಸಮಸ್ಯೆಗಳನ್ನು ಕಾರ್ಯಕರ್ತರು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ನ್ಯಾಯ ಒದಗಿಸುವ ಹೋರಾಟ ರೂಪಿಸಲಾಗುವುದು.
ಕೊಳಗೇರಿ ಅಭಿವೃದ್ದಿ ಮಂಡಲಿಯಿಂದ ಕೊಳಗೇರಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಯತ್ನಿಸಲಾಗುವುದು ಎಂದರು. ಜುಲೈ 14ರಂದು ನಗರದ ಸಂಜಯನಗರದಲ್ಲಿ ಕನ್ನಡ ಪಕ್ಷದ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್, ಹಿರಿಯ ಮುಖಂಡರಾದ ಸುಲೋಚನಮ್ಮ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಕನ್ನಡ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ತಾಲೂಕು ಉಪಾಧ್ಯಕ್ಷ ಗುರು ಮೂರ್ತಿ, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಮುಖಂಡರಾದ ಉಮಾಶಂಕರ್, ಮೂರ್ತಿ, ಮಂಜಣ್ಣ, ಪರಮೇಶ್ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….