ಒಂದಾನೊಂದು ಕಾಲದಲ್ಲಿ ಒಂದು ಸಣ್ಣ ಊರಿನಲ್ಲಿ ಅಜ್ಜಿಯೊಬ್ಬಳು ಇದ್ದಳು. ಒಂದು ದಿನ ಮಳೆ ಬಂತು. ಚಳಿ ಚಳಿಯಾಯಿತು. ಅಜ್ಜಿ ಎದ್ದು ಶಾಲು ಹೊದ್ದು ಹೊರಗೆ ಛತ್ರಿ ಹಿಡಿದು ಹೊರಟಳು.
ಅಲ್ಲಿ ಇಲ್ಲಿ ಹುಡುಕಿ ಒಣಗಿದ್ದ ಕಡ್ಡಿಪುಳ್ಳೇ ಆರಿಸಿಕೊಂಡಳು, ಬಂದು ಕಡ್ಡಿಗೀರಿ ಒಲೆ ಹಚ್ಚಿದಳು. ಹತ್ತಲಿಲ್ಲ. ಬೇರೆ ಕಡ್ಡಿ ಗೀಚಿದಳು. ‘ಚರ್’ ಎಂತ ಒಲೆ ಹತ್ತಿತು, ‘ಧಗ-ಧಗ’ ಅಂತ ಉರಿಯಿತು. ಒಲೆ ಮೇಲೆ ಬಾಣಲೆ ಇಟ್ಟಳು. ಎಣ್ಣೆ ತುಪ್ಪ ಹಾಕಿದಳು. ಎಣ್ಣೆ ಕೊತ ಕೊತ ಅಂತ ಕುದಿಯಿತು,
ಅಜ್ಜಿ ಜಿಲೇಬಿ ಹಿಟ್ಟು ರೆಡಿ ಮಾಡಿಕೊಂಡಳು. ಕಾದ ಎಣ್ಣೆಯಲ್ಲಿ ‘ಚುಂಯ್’ ಎಂದು ಗುಂಡಗೆ ಒಂದು ಜಿಲೇಬಿ ಮಾಡಿದಳು. ಜಿಲೇಬಿ ಗುಂಡಗೆ ಗರಿಗರಿಯಾಗಿ ಕೇಸರಿ ಬಣ್ಣದ್ದಾಗಿತ್ತು.
ಅಜ್ಜಿ ತಟ್ಟೆಯ ಮೇಲೆ ಅದನ್ನು ಇರಿಸಿ, ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಅದು ಕೆಳಗೆ ಉರುಳಿಬಿದ್ದಿತು. ಗುಡು ಗುಡು ಎಂದು ಓಡೇಬಿಟ್ಟಿತು. ಅಜ್ಜಿಗೆ ಅಳು ಬಂತು, ಜಿಲೇಬಿಯ ಹಿಂದೆಯೇ ಓಡಿದಳು. ಅದು ಮನೆ ಆಚೆ ಓಡಿತು. ಮಳೆ ನಿಂತು ಹೂ ಬಿಸಿಲು ಬಂದಿತ್ತು. ಜಿಲೇಬಿ ಮುಂದೆ ಅಜ್ಜಿ ಹಿಂದೆ. ‘ಬಾ ಗುಂಡು ಜಿಲೇಬಿ, ಬಾ’ ಎಂದು ಅಜ್ಜಿ ಕೂಗಿದಳು. ಜಿಲೇಬಿ ನಕ್ಕಿತು.
‘ನಾನೊಂದು ಗುಂಡು ಜಿಲೇಬಿ ಜಿಗಿಯುತ್ತೇನೆ, ನೆಗೆಯುತ್ತೇನೆ, ಹಾರುತ್ತೇನೆ, ಕುಣಿಯುತ್ತೇನೆ, ಟ್ರಾಲಲಲ್ಲಾಲಾ, ಟ್ರಾಲಲಲ್ಲಾಲಾ,’ ಅಂತ ಹಾಡುತ್ತಾ ಓಡಿತು.
ಅಲ್ಲಿಯೇ ಒಂದು ಬೆಕ್ಕು, ‘ಏನಜ್ಜಿ, ಯಾಕೆ ಒಡುತ್ತಿದ್ದೀ?’ ಅಂತ ಕೇಳಿತು. ಅಲ್ಲಿ ನೋಡು ಬೆಕ್ಕಣ್ಣಾ, ಆ ಗುಂಡು ಜಿಲೇಬಿ ಹೇಗೆ ಓಡುತ್ತಿದೆ. ಹಿಡಿಕೊಂಡು ‘ ಬಾರಪ್ಪ’ ಎಂತ ಹೇಳಿದಳು. ತಾಳು ಅಜ್ಜಿ, ನಾನು ತರುತ್ತೇನೆ ಅಂತ ಅದು ಓಡಿತು.
‘ ಬಾ ಜಿಲೇಬಿ, ಅಜ್ಜಿ ಕರೀತಾ ಇದ್ದಾಳೆ’ ಅಂತ ಬೆಕ್ಕು ಹೇಳಿದ್ದಕ್ಕೆ, ‘ನಾನೊಂದು ಗುಂಡು ಜಿಲೇಬಿ ಜಿಗಿಯುತ್ತೇನೆ, ನೆಗೆಯುತ್ತೇನೆ, ಹಾರುತ್ತೇನೆ, ಕುಣಿಯುತ್ತೇನೆ, ಬ್ರಾಲಲಲ್ಲಾಲಾ, ಟ್ರಾಲಲಲ್ಲಾಲಾ,’ ಅಂತ ಹಾಡಿ ಓಡಿತು.
ನಾಯಿಯೊಂದು ಬಂತು. ಬೆಕ್ಕನ್ನು ‘ಎಲ್ಲಿಗೆ ಓಡುತ್ತಿದ್ದೀ?’ ಎಂದು ಕೇಳಿತು.’ ಅದೋ ಅಲ್ಲಿ ಓಡುತ್ತಿದೆಯಲ್ಲಾ? ಆ ಗುಂಡು ಜಿಲೇಬಿಯನ್ನು ಹಿಡಿಯಲು, ಅಜ್ಜಿ ಕೈಯಿಂದ ತಪ್ಪಿಸಿಕೊಂಡು ಹೀಗೆ ಓಡುತ್ತಿದೆ’ ಅಂತು. ನಾಯಿ, ‘ಬಿಡು, ನಾನು ಹಿಡಿದುಕೊಂಡು ಬರ್ತೀನಿ’ ಅಂತ ಜಿಲೇಬಿ ಹಿಂದೆ ಓಡಿತು. ಜಿಲೇಬಿ ಹಾಡಿಕೊಂಡು ಓಡಿತು. ಅಷ್ಟು ಹೊತ್ತಿಗೆ ಉದ್ದ ಕೊಂಬುಗಳಿದ್ದ ಎತ್ತೊಂದು ಬಂತು. “ಏನು, ಯಾಕೆ ಹೀಗೆ ಓಡುತ್ತಿದ್ದೀ?’ ಎಂದು ನಾಯಿಯನ್ನು ಕೇಳಿತು.
ನಾಯಿ ನಡೆದ ಕತೆ ಹೇಳಿತು. ನಾಯಿ, ನಾಯಿ ಹಿಂದೆ ಬೆಕ್ಕು, ಬೆಕ್ಕಿನ ಹಿಂದೆ ಅಜ್ಜಿ ಕನ್ನಡ ಅಭಿವೃದ್ಧಿ ಎಲ್ಲರನ್ನೂ ನೋಡಿತು. ‘ಏ ಜಿಲೇಬಿ, ಬಾ ಹಿಂದಕ್ಕೆ ಬಾ’ ಅಂತ ಹಿಡಿಯಲು ಹೋಯಿತು.
ಜಿಲೇಬಿ, ‘ಹ ಹಾ.. ಹ ಹ ಹಾ’ ಎಂತ ನಗುತ್ತಾ ಹಾಡಿತು. ಓಡಿತು. ‘ನಾನೊಂದು ಗುಂಡು ಜಿಲೇಬಿ ಜಿಗಿಯುತ್ತೇನೆ, ನೆಗೆಯುತ್ತೇನೆ, ಹಾರುತ್ತೇನೆ, ಕುಣಿಯುತ್ತೇನೆ, ಟ್ರಾಲಲಲ್ಲಾಲಾ, ಟ್ರಾಲಲಲ್ಲಾಲಾ’
ಅಲ್ಲೊಂದು ಎಮ್ಮೆ ಹುಲ್ಲು ಮೇಯುತ್ತಾ ನಿಂತಿತ್ತು. ‘ಏಕೆ ಹೀಗೆ ಓಡುತ್ತಿದ್ದೀರಿ’ ಅಂತ ಎತ್ತನ್ನು ಕೇಳಿತು. ಎತ್ತು ಗುಂಡು ಜಿಲೇಬಿಯ ಕಡೆ ತೋರಿಸಿ ಕಥೆ ಹೇಳಿತು. ಎಮ್ಮೆ, ‘ನಾನು ಹಿಡಿಯುತ್ತೇನೆ ತಾಳಿ’ ಎಂದು ಓಡಿತು. ಅಜ್ಜಿ, ಅಜ್ಜಿ ಮುಂದೆ ಬೆಕ್ಕು, ಬೆಕ್ಕಿನ ಮುಂದೆ ನಾಯಿ, ನಾಯಿಯ ಮುಂದೆ ಎತ್ತು, ಎತ್ತಿನ ಮುಂದೆ ಎಮ್ಮೆ ಎಲ್ಲಾ ಓಡಿದವು.
ಗುಂಡು ಜಿಲೇಬಿ ‘ಟ್ರಾಲಲಲ್ಲಾಲಾ’ ಅಂತ ಹಾಡುತ್ತಾ ಓಡಿಬಿಟ್ಟಿತು. ಆಗ ಅಡ್ಡವಾಗಿ ಒಂದು ನದಿ ಬಂತು. ಜಿಲೇಬಿಗೆ ಭಯವಾಯಿತು. ಒದ್ದೆಯಾದರೆ ಮೆತ್ತಗಾಗಿ ಸತ್ತೇ ಹೋಗುವೆನಲ್ಲಾ ಎಂದು ನಿಂತುಬಿಟ್ಟಿತು. ಅಷ್ಟು ಹೊತ್ತಿಗೆ ನರಿಯೊಂದು ಬಂತು. ನರಿ ಎಂದರೆ ಗೊತ್ತಲ್ಲ ಎಂತಹ ಚತುರಪ್ರಾಣಿ ಅಂತ! ಅಷ್ಟೇ ಘಾಟಿಯೂ ಹೌದು, ಅಲ್ಲವೆ. ‘ಯಾಕಣ್ಣ ಜಿಲೇಬಿ, ಹೀಗೆ ನಿಂತೆ’ ಎಂತ ಕೇಳಿತು.
‘ನರಿಯಣ್ಣಾ, ನಾನು ಅಜ್ಜಿ ಕೈಯಿಂದ ತಪ್ಪಿಸಿಕೊಂಡು ಓಡಿ ಬಂದೆ. ನನ್ನನ್ನು ಅಟ್ಟಿಸಿಕೊಂಡು ಬೆಕ್ಕು, ನಾಯಿ, ಎತ್ತು, ಎಮ್ಮೆ ಬರುತ್ತಿದ್ದಾರೆ ನೋಡು. ನನ್ನ ಕಾಪಾಡಣ್ಣಾ’ ಎಂದು ಬೇಡಿತು. ಗರಂ ಗರಂ ಅಂತ ಗುಂಡಾಗಿದ್ದ ಕೇಸರಿ ಜಿಲೇಬಿ. ನರಿಯ ಬಾಯಲ್ಲಿ ನೀರು ಬಂತು.
‘ಅಯ್ಯೋ ಪಾಪ, ಬಾ ಜಿಲೇಬಿ. ನಿನ್ನ ನಾನು ನದಿ ದಾಟಿಸಿ ಆ ದಡಕ್ಕೆ ಕರೆದುಕೊಂಡು ಹೋಗಿ ಬಿಡ್ತೀನಿ’ ಅಂತ ಹೇಳಿ ನೀರಿಗಿಳಿಯಿತು. ಜಿಲೇಬಿಗೆ ತುಂಬಾ ಖುಷಿಯಾಯಿತು.
‘ನನ್ನ ಬಾಲಕ್ಕೆ ಸಿಕ್ಕಿಹಾಕಿಕೋ’ ಎಂತ ನರಿ ಹೇಳಿತು ನರಿ ನದಿಯಲ್ಲಿ ಸ್ವಲ್ಪ ದೂರ ಹೋಯಿತು. ‘ಜಿಲೇಬಿ, ಜಿಲೇಬಿ. ಬಾಲಕ್ಕೆ ಭಾರ ಜಾಸ್ತಿ ಆಯಿತು. ಸ್ವಲ್ಪ ಸೊಂಟದ ಮೇಲೆ ಬಾ’ ಅಂತ ಹೇಳಿತು. ಜಿಲೇಬಿ ಸೊಂಟದ ಮೇಲೆ ಕೂತಿತು.
ನರಿ ಇನ್ನೂ ಕೊಂಚ ದೂರ. ಹೋಯಿತು. ‘ಜೀಲೇಬಿ, ಸೊಂಟ ನೋಯುತ್ತೆ, ಸ್ವಲ್ಪ ಬೆನ್ನಿನ ಮೇಲೆ ಬಾಪ್ಪ’ ಅಂತ ಹೇಳಿತು. ಜಿಲೇಬಿ ಬೆನ್ನ ಮೇಲೆ ಕೂತಿತು. ನರಿ, ಇನ್ನೊಂದು ಹತ್ತು ಹೆಜ್ಜೆ ಹೋಗಿ, ‘ಜಿಲೇಬಿ ಜಿಲೇಬಿ ಬೆನ್ನು ನೋಯುತ್ತೆ. ತಲೆ ಮೇಲೆ ಕುಳಿತುಕೋ’ ಎಂತು.
‘ಹಾಗೆ ಆಗಲಿ’ ಅಂತ ಮಂಡಲ ಜಿಲೇಬಿ ನರಿಯ ತಲೆ ಮೇಲೆ ಕೂತು ನೀರನ್ನು ನೋಡುತ್ತಾ ಹೋಗುತ್ತಿತ್ತು. ನದಿ ಮಧ್ಯದಲ್ಲಿ ನಿಂತ ನರಿ ಹೇಳಿತು, ‘ಜಿಲೇಬಿ ತಲೆ ಭಾರವಾಗಿ ಸಿಡಿಯುತ್ತಿದೆ, ಮೂಗಿನ ಮೇಲೆ ಕೂಡು.’ ‘ಸರಿಯಪ್ಪಾ’ ಎಂದು ಹೇಳಿದ ಜಿಲೇಬಿ ನರಿಯ ಮೂಗಿನ ಮೇಲೆ ಕೂತಿತು.
ನರಿ ದೊಡ್ಡದಾಗಿ ಬಾಯಿ ತೆರೆದು ಜಿಲೇಬಿಯನ್ನು ‘ಗುಳುಂ’ ಎಂತ ನುಂಗಿತು. ಮುಗಿಯಿತು ಜಿಲೇಬಿ ಕತೆ, ‘ಟ್ರಾ,ಲಲಲ್ಲಾಲಾ,’
ಕೃಪೆ: ಮಕ್ಕಳ ಅಭಿವೃದ್ಧಿ ಪ್ರಾಧಿಕಾರ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….