ಬೆಂಗಳೂರು, (ಆಗಸ್ಟ್. 29); ಗೆಳತಿಯೊಂದಿಗೆ ಮದ್ಯ ಸೇವಿಸಿ ಮನೆಗೆ ಬಂದು ಮಲಗಿದ್ದ ಪತ್ನಿಯನ್ನು ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಹತ್ಯೆಗೈದು ಕ್ಯಾಬ್ ಚಾಲಕನೊಬ್ಬ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಕೆಂಗೇರಿ ಉಪನಗರ ಸಮೀಪ ನಡೆದಿದೆ.
ವಿಶ್ವೇಶ್ವರಯ್ಯ ಲೇಔಟ್ ನಿವಾಸಿ 28 ವರ್ಷದ ನವ್ಯಶ್ರೀಕೊಲೆಯಾದ ದುರ್ದೈವಿಯಾಗಿದ್ದು, ಈ ಹತ್ಯೆ ಬಳಿಕ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಕಿರಣ್ ಶರಣಾಗಿದ್ದಾನೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಆತ ಹತ್ಯೆಗೈದಿದ್ದಾಗಿ ವಿಚಾರಣೆ ವೇಳೆ ಆರೋಪಿ ತಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ನೃತ್ಯ ಶಿಕ್ಷಕಿ ನವ್ಯಾ ಹಾಗೂ ಕ್ಯಾಬ್ ಚಾಲಕ ಕಿರಣ್ ಪ್ರೇಮ ವಿವಾಹವಾಗಿದ್ದು, ಮದುವೆ ನಂತರ ಕೆಂಗೇರಿ ಸಮೀಪದ ಸರ್.ಎಂ.ವಿಶ್ವೇ ಶ್ವರಯ್ಯ ಲೇಔಟ್‌ನಲ್ಲಿ ದಂಪತಿ ವಾಸವಾಗಿದ್ದರು.
ಇತ್ತೀಚೆಗೆ ಕೌಟುಂಬಿಕ ಕಲಹದಿಂದ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿಯ ಶೀಲ ಶಂಕಿಸಿ ಕಿರಣ್ ಜಗಳವಾಡುತ್ತಿದ್ದ. ತನಗೆ ಪತಿ ಕಿರಣ್ ಚಿತ್ರ ಹಿಂಸೆ ಕೊಡುತ್ತಿರುವ ಸಂಗತಿಯನ್ನು ಸ್ನೇಹಿತರ ಜತೆ ನವ್ಯಾ ತೋಡಿಕೊಂಡಿದ್ದಳು ಎನ್ನಲಾಗಿದೆ.
ಅಂತೆಯೇ ತನ್ನ ಸ್ನೇಹಿತೆಯನ್ನು ಮಂಗಳವಾರ ಬೆಳಗ್ಗೆ ನವ್ಯ ಭೇಟಿಯಾಗಿದ್ದಳು. ನಂತರ ರಾಜ ರಾಜೇಶ್ವರಿ ನಗರಕ್ಕೆ ಕಾರಿನಲ್ಲಿ ತೆರಳಿ ಅಲ್ಲಿ ತಮ್ಮ ಸ್ನೇಹಿತನನ್ನು ಇಬ್ಬರು ಭೇಟಿಯಾಗಿದ್ದಾರೆ. ಆಗ ತನ್ನ ಕೌಟುಂಬಿಕ ಗಲಾಟೆ ಸಂಗತಿಯನ್ನು ಮತ್ತೆ ನವ್ಯಾ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಆಗ ಈ ಬಗ್ಗೆ ಪತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಆಕೆಗೆ ಸ್ನೇಹಿತ ಅನಿಲ್ ಸಲಹೆ ಕೊಟ್ಟಿದ್ದ.
ಇದಾದ ನಂತರ ಮದ್ಯ ಸೇವಿಸಿ ರಾತ್ರಿ 11.30 ಗಂಟೆಗೆ ತನ್ನ ಸ್ನೇಹಿತೆಯ ಜತೆ ಮನೆಗೆ ಬಂದು ನವ್ಯಾ ಮಲಗಿದ್ದಾಳೆ. ಆದರೆ ಪತ್ನಿ ಬರುವ ಮುನ್ನವೇ ತನ್ನ ಬಳಿ ಇದ್ದ ಮನೆಯ ಮತ್ತೊಂದು ಕೀ ಬಳಸಿ ಒಳ ಪ್ರವೇಶಿಸಿದ ಕಿರಣ್, ರೂಮ್‌ನಲ್ಲಿ ಮಲಗಿದ ಪತ್ನಿ ಕುತ್ತಿಗೆ ಚಾಕುವಿನಿಂದ ಕುಯ್ದು ಕೊಂದು ಬಳಿಕ ಪರಾರಿಯಾಗಿದ್ದಾನೆ.
ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದ ಬಳಿಕ ತಾನಾಗಿಯೇ ಬಂದು ಆತ ಶರಣಾಗಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….