ಬೆಂಗಳೂರು: ಜಿಎಸ್‌ಟಿ ಕಮಿಟಿ ಹಾಗೂ ಹಣಕಾಸು ಆಯೋಗ ಬೇರೆ ಬೇರೆ ಎಂಬ ವಿಚಾರ ಕಡಲೆಕಾಯಿ ಬೆಳೆಯುವ ನಾಡಿನ ಸಾಮಾನ್ಯ ರೈತನಿಗೆ ಇರುವಷ್ಟೂ ಕನಿಷ್ಠ ಜ್ಞಾನ ವಿಪಕ್ಷ ನಾಯಕರಾದ ಆರ್.ಅಶೋಕ ಗೆ ಇಲ್ಲದಿರುವುದು ಈ ನಾಡಿನ ದೌರ್ಭಾಗ್ಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದ್ದಾರೆ.
ಪ್ರತಿಪಕ್ಷ ನಾಯಕ ಅಶೋಕರ ಹೇಳಿಕೆ ನಿಜಕ್ಕೂ ಆಘಾತವಾಗಿದ್ದು, ಜವಾಬ್ದಾರಿಯುತ ಸ್ಥಾನ ಹಾಗೂ ಈ ಹಿಂದೆ ಕಂದಾಯ ಇಲಾಖೆಯ ಸಚಿವರಾಗಿದ್ದವರಿಗೆ ಜಿಎಸ್‌ಟಿ ಕಮಿಟಿ ಹಾಗೂ ಹಣಕಾಸು ಆಯೋಗದ ನಡುವಿನ ವ್ಯತ್ಯಾಸ ತಿಳಿಯದಿರುವುದು ಅಚ್ಚರಿಯ ವಿಚಾರ. ಸಿಎಂ ಸಿದ್ದರಾಮಯ್ಯರನ್ನು ಟೀಕಿಸುವ ಬರದಲ್ಲಿ ನನ್ನ ವಿರುದ್ಧವೂ ಕೀಳುಮಟ್ಟದ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಾದ ನಡೆ ಅಲ್ಲ ಎಂದು ಟೀಕಿಸಿದ್ದಾರೆ.
ಕೇಂದ್ರದ ತೆರಿಗೆಗೆ ಕರ್ನಾಟಕದ ಕೊಡುಗೆ ಹಾಗೂ ಕೇಂದ್ರ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಇನ್ನೊಮ್ಮೆ ಗಮನಿಸಿದರೆ, ಪ್ರತಿ ವರ್ಷ ಕೇಂದ್ರದ ಒಟ್ಟು ತೆರಿಗೆ ಆದಾಯಕ್ಕೆ ಕರ್ನಾಟಕದ ಪಾಲು ಸುಮಾರು 4 ಲಕ್ಷ ಕೋಟಿ, ದೇಶದ ಜನ ಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ.5 ರಷ್ಟಿದ್ದರೂ ರಾಷ್ಟ್ರೀಯ ಜಿಡಿಪಿಗೆ ಶೇ.8.4. ಒಟ್ಟಾರೆ ದೇಶಕ್ಕೆ ಜಿಎಸ್‌ಟಿ ಕೊಡುಗೆಯಲ್ಲಿ ರಾಜ್ಯವು 2ನೇ ಸ್ಥಾನದಲ್ಲಿದೆ. ಆದರೆ, ನಾವು ಕೊಡುವ ಒಂದು ರೂಪಾಯಿಗೆ ಪ್ರತಿಯಾಗಿ ನಮ್ಮ ರಾಜ್ಯ ಪಡೆಯುತ್ತಿರುವ ಪಾಲು ಕೇವಲ 15 ಪೈಸೆ ಮಾತ್ರ ಎಂದು ತಿಳಿಸಿದ್ದಾರೆ.
ಕರ್ನಾಟಕಕ್ಕೆ 79,770 ಕೋಟಿ ನಷ್ಟ: 14ನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.713 ಎಂದು ನಿಗದಿಪಡಿಸಿತ್ತು. 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.647ಕ್ಕೆ ಇಳಿಸಿತು. ಇದರಿಂದ 2021-26 ರವರೆಗಿನ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು 62,275 ಕೋಟಿ ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯ ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು.
ಇದನ್ನು ಕೇಂದ್ರ ಸರಕಾರ ನೀಡದೆ ಅನ್ಯಾಯ ಎಸಗಿದೆ. ಈ ಎಲ್ಲ ನಷ್ಟ ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ 79,770 ಕೋಟಿ ನಷ್ಟವಾಗಿದೆ ಎಂದಿದ್ದಾರೆ.
ಜಿಎಸ್‌ಟಿ ತೆರಿಗೆ ಪಾಲಿನ ಮೋಸ ಒಂದೆಡೆಯಾದರೆ, ರಾಜ್ಯಕ್ಕೆ ನೀಡಬೇಕಾದ ಬರ ಪರಿಹಾರದಲ್ಲೂ ಕೇಂದ್ರ ಸರಕಾರ ನಡೆದುಕೊಂಡ ರೀತಿ ಸರಿಯಲ್ಲ. ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ನೀಡಬೇಕಾದ ಕೇಂದ್ರ ತೀರಾ ಶೋಷಣೆಯ ದಾರಿ ಹಿಡಿದಿತ್ತು. ಕೊನೆಗೆ ಭಾರತೀಯ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರಕಾರವೊಂದು ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿ ಪರಿಹಾರ ಪಡೆಯಬೇಕಾದ ಸನ್ನಿವೇಶ ಎದುರಾಯಿತು. ಆದರೆ, ಈ ಬಗ್ಗೆ ಸಂಸತ್‌ನಲ್ಲಿ ದನಿ ಎತ್ತಿದ ಒಬ್ಬೇ ಒಬ್ಬ ಬಿಜೆಪಿ ಸಂಸದರನ್ನು ಈ ನಾಡು ಕಂಡಿಲ್ಲ.
ಬಿಜೆಪಿಯ 27 ಸಂಸದರಿದ್ದರೂ ಉಪಯೋಗವಾಗಲಿಲ್ಲ. ಸ್ವತಃ ಹಣಕಾಸು ಸಚಿವೆ ಇದೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿದ್ದಿರಿ. ಆದರೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ನಿಂತಿಲ್ಲ ಎಂದು ಆರೋಪಿಸಿದ್ದಾರೆ.