ಬೆಂಗಳೂರು ಗ್ರಾಮಾಂತರ ಜಿಲ್ಲೆ; ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನೀಡಲಾದ ರಾಜ್ಯೋತ್ಸವ ಪ್ರಶಸ್ತಿ (rajyotsava award) ಗೊಂದಲ, ಆಕ್ಷೇಪ, ಬೇಸರಕ್ಕೆ ಕಾರಣವಾಗುವ ಮೂಲಕ ಜಿಲ್ಲಾಡಳಿತವನ್ನು ನಗೆಪಾಟಲಿಗೀಡಾಗುವಂತೆ ಮಾಡಿದೆ.
ಸಾಧಕರಿಗೆ ಸನ್ಮಾನ, ಗೌರವ ಸಲ್ಲಿಕೆಯಲ್ಲಿ ಜಿಲ್ಲಾಡಳಿತ ಲೋಪವೆಸಗಿರುವ ಆರೋಪ ವ್ಯಾಪಕವಾಗಿದೆ.
ಈ ಕುರಿತು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನಕಾರ್ಯದರ್ಶಿ ರಾಜಘಟ್ಟ ರವಿ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ರಾಜಘಟ್ಟರವಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆದರೆ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಬೇಕಾಬಿಟ್ಟಿ ವರ್ತನೆ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಕುರಿತು ಫೇಸ್ಬುಕ್ ಪುಟದಲ್ಲಿ ಮಂಡ್ಯ ಜಿಲ್ಲಾಡಳಿತ ನೀಡಲಾದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ನೀಡಿರುವ ಪ್ರಶಸ್ತಿಯನ್ನು ಪೋಸ್ಟ್ ಮಾಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಘಟ್ಟರವಿ ಅವರ ಪೋಸ್ಟ್: ಒಂದು ಮಂಡ್ಯದ ಜಿಲ್ಲಾಡಳಿತ ನೀಡಿರುವ ಫಲಕ ಇನ್ನೊಂದು ನಮ್ಮ ಜಿಲ್ಲಾಡಳಿತ ನೀಡಿರುವ ಫಲಕ (ವ್ಯತ್ಯಾಸ ಗಮನಿಸಿ). ಸನ್ಮಾನ ಎನ್ನುವುದು ಜೀವನ ಪೂರ್ತಿ ದುಡಿದವರಿಗೆ ಜೀವನದಲ್ಲಿ ಒಂದು ಬಾರಿ ಸಿಗುವುದು.
ಅದನ್ನು ಇಷ್ಟು ಬೇಕಾ ಬಿಟ್ಟಿ ನಿರ್ಲಕ್ಷ್ಯ ಕೇವಲವಾಗಿ ನೀಡುವುದು ಆಯ್ಕೆ ಬಗ್ಗೆ ಕೂಡ ಗೊಂದಲ, ಆಯ್ಕೆಯ ಬಗ್ಗೆ ಪತ್ರಿಕೆಗಳಲ್ಲಿ ಬಂದ ಅನುಮಾನಿತ ವರದಿಗಳು, ಗೌರವವಾಗಿ ಒಂದು ಆಹ್ವಾನ ಕೂಡ ಇಲ್ಲಾ..
ವೇದಿಕೆಯಲ್ಲಿ ಕಡೆಯ ಪಕ್ಷ ಅವರ ಬಗ್ಗೆ ಒಂದು ಪರಿಚಯ ಕೂಡ ಇಲ್ಲಾ.. ಇದು ಸನ್ಮಾನ ಅಲ್ಲಾ ಇದೊಂದು ಅವಗಣನೆ, ಅವಮಾನ..
ಯಾರೋ ಹೊಡ್ಕೊಂಡವರು, ನಿಮ್ಮನ್ನ ಮೆಚ್ವಬಹುದು ಗಳಿಸಿದವರಲ್ಲ.. ಇನ್ನು ಮುಂದಾದರು ಸನ್ಮಾನಿತರನ್ನು ಗೌರವಿಸಿ. ಆಗಲ್ಲ ಅಂದರೆ ಸುಮ್ಮನಿದ್ದು ಬಿಡಿ ಕರೆದು ಅವಮಾನಿಸ ಬೇಡಿ. ಎಂದು ಬರೆದಿರುವ ರಾಜಘಟ್ಟರವಿ ಆಯ್ಕೆ ಸಮಿತಿ ಗುರುತಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
ಮತ್ತೊಂದೆಡೆ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಶಸ್ತಿಯ ಮೇಲೆ ಜಿಲ್ಲಾಡಳಿತ ಹಿಡಿತ ಕಳೆದುಕೊಂಡಿದ್ದು, ಪ್ರಸಾದ ಹಂಚಿದಂತೆ ಅಪಾತ್ರರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.