ಹಾವೇರಿ: ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವ ರೀತಿಯಲ್ಲಿ ಭಾಷಣ ಮಾಡಿದ್ದ ಆರೋಪದಡಿ ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಮೂವರ ವಿರುದ್ದ ಶಿಗ್ಗಾವಿ ಠಾಣೆಯಲ್ಲಿ ಎರಡು ಎಫ್ಐಆರ್ (fir) ದಾಖಲಾಗಿವೆ.
‘ರಾಜ್ಯ ಸರಕಾರ ವಕ್ಸ್ ಆಸ್ತಿ ಕಬಳಿಸುತ್ತಿದೆ’ ಎಂದು ಆರೋಪಿಸಿ ನ. 4ರಂದು ಬಿಜೆಪಿ ವತಿಯಿಂದ ಶಿಗ್ಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದಡಿ ಬಸವರಾಜ ಬೊಮ್ಮಾಯಿ, ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ ಹಾಗೂ ಸಿ.ಟಿ.ರವಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದೇ ಸಂದರ್ಭದಲ್ಲಿಯೇ, ಎರಡು ಗುಂಪುಗಳ ನಡುವೆ ದ್ವೇಷ ಉಂಟು ಮಾಡುವ ರೀತಿಯಲ್ಲಿ ಆರೋಪಿಗಳು ಭಾಷಣ ಮಾಡಿದ್ದರು. ಹೀಗಾಗಿ, ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಂಶುಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.