ಬೆಂಗಳೂರು: ರಾಜ್ಯದ 14 ಲಕ್ಷ ಬಡವರಿಗೆ ನೀಡಲಾಗಿದ್ದ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಘೋರ ಅಪರಾಧವನ್ನು ರಾಜ್ಯ ಸರಕಾರ ಮಾಡಿದೆ. ಅದರಲ್ಲೂ ನಮಗೆ ಮತ ಹಾಕಿದ್ದಾರಾ ಎಂದು ಜಾತಿ, ಕೋಮು ಹುಡುಕಿ BPL ಕಾರ್ಡ್ ರದ್ದು ಮಾಡುತ್ತಿರುವ ದೂರುಗಳಿವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಡವರ ಅನ್ನಕ್ಕೂ ಕನ್ನ ಹಾಕುವ ಪರಮ ಅನ್ಯಾಯ ಇದಾಗಿದೆ. ಜಾತಿ ಹುಡುಕಿ ಕಾರ್ಡ್ ರದ್ದು ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಆರೆಸ್ಸೆಸ್, ಬಿಜೆಪಿಯನ್ನು ವಿಷ ಸರ್ಪಕ್ಕೆ ಹೋಲಿಸಿದ್ದಾರೆ. ಅನುಭವ ಪಕ್ವತೆಯನ್ನು ಪಡೆದುಕೊಳ್ಳಬೇಕು. ಹಿರಿತನಕ್ಕೆ ತಕ್ಕ ಮಾತು ಅದಲ್ಲ; ಅವರ ಮಾತುಗಳು ಹುಚ್ಚುನಾಯಿ ಕಡಿತಕ್ಕೆ ಒಳಗಾದವರು ಆಡುವ ಮಾತಿನಂತಿತ್ತು.
ಖರ್ಗೆಯವರು ಆ ಮಾತನಾಡಿದ್ದಾರೋ ಅಥವಾ ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಖರ್ಗೆಯವರ ಮೂಲಕ ಮಾತನ್ನಾಡಿಸಿದ್ದಾರೋ ಗೊತ್ತಿಲ್ಲ. ಅವರ ಮಾತು ಸಂವಿಧಾನದ ಮೇಲೆ ನಂಬಿಕೆ ಇಟ್ಟವರ ಮಾತಲ್ಲ. ಹೊಡಿ, ಬಡಿ ಕೊಲ್ಲು ಎಂಬ ತಾಲಿಬಾನಿಗಳ ಮಾತಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿಗೆ ಅನುದಾನ ಕೇಳಿದರೆ, ಮುಖ್ಯಮಂತ್ರಿಗಳು ಎಲ್ಲಿಂದ ದುಡ್ಡು ತರೋದು: ಸ್ವಲ್ಪ ತಡ್ಕೊಳ್ಳಿ ಎನ್ನುತ್ತಾರೆ. ಹಾಗಾಗಿ ಇದು ಹೊಸದೇನಲ್ಲ; ಅದಕ್ಕಾಗಿ ಬಡವರ ಅನ್ನವನ್ನೂ ಬಿಪಿಎಲ್ ಕಾರ್ಡ್ ರದ್ದು ಮೂಲಕ ಕಿತ್ತುಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.
ಇನ್ನೂ ಟ್ವಿಟ್ ಮಾಡಿರುವ ಸಿಟಿ ರವಿ, ದೇಶ ಕಂಡರಿಯದ ಅದ್ಭುತ, ಕರ್ನಾಟಕ ಕಾಂಗ್ರೆಸ್ ಸರ್ಕಾರದ “ಗ್ಯಾರೆಂಟಿ ಸ್ಕೀಮ್”. ಅಧಿಕಾರಕ್ಕೆ ಬರುವವರೆಗೆ ಉಚಿತ ಉಚಿತ ಅಂದಿದ್ದು ಒಂದು ದೊಡ್ಡ ಸ್ಕ್ಯಾಮ್ ಅನ್ನೋದು ರಾಜ್ಯದ ಜನತೆಗೆ ಅರಿವಾಗಿದೆ .
ಸ್ಟ್ಯಾಂಪ್ ಡ್ಯೂಟಿ ಏರಿಕೆ!
ಎಕ್ಸೈಸ್ ಡ್ಯೂಟಿ ಏರಿಕೆ!
ವಿದ್ಯುತ್ ಬಿಲ್ ಏರಿಕೆ!
ಬಸ್ ದರ ಏರಿಕೆ!
ಮನೆಕರ ಏರಿಕೆ!
ನೀರಿನ ದರ ಏರಿಕೆ!
ಬಾಂಡ್ ಪೇಪರ್ ಬೆಲೆ ಏರಿಕೆ!
ಬಿತ್ತನೆ ಬೀಜದ ಬೆಲೆ ಏರಿಕೆ!
ಹಾಲಿನ ಪ್ರೋತ್ಸಾಹಧನ ಖೋತಾ!
ರಾಜ್ಯದಿಂದ ಕೊಡುತ್ತಿದ್ದ ಕಿಸಾನ್ ಸಮ್ಮಾನ್ ನಿಧಿ ಖೋತಾ!
ರೈತ ವಿದ್ಯಾನಿಧಿ ಖೋತಾ!
ಹೀಗೆ ಪಟ್ಟಿ ಮುಂದುವರೆಯುತ್ತದೆ.
ಇಂತಿಪ್ಪ ಜನಪಯೋಗಿ ಕಾರ್ಯ ನಡೆಸಿದ ಕಾಂಗ್ರೆಸ್ ಸರ್ಕಾರ ಈಗ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಹೊಸ ಯೋಜನೆ ತಂದಿದೆ. ಬಡವರಿಗೆ ನೀಡುವ ಅನ್ನಕ್ಕೆ ಕನ್ನ ಆಗಿದೆ. ಕರ್ನಾಟಕ ಸರ್ಕಾರದ ಗ್ಯಾರೆಂಟಿ, ಅದಕ್ಕಿಲ್ಲ ಯಾವುದೇ ವಾರೆಂಟಿ ಎಂದು ಲೇವಡಿ ಮಾಡಿದ್ದಾರೆ.