ಬ್ರಹ್ಮದತ್ತನು ಕಾಶೀರಾಜ್ಯವನ್ನು ಆಳುತ್ತಿದ್ದಕಾಲದಲ್ಲಿ ಬೋಧಿಸತ್ವನು ಒಂದು ಬಂಗಾರದ ನವಿಲಾಗಿ ಜನ್ಮವೆತ್ತಿದನು. ಅದು ಅಪರೂಪವೆಂಬಂತಹ ಅಪ್ಪಟ ಬಂಗಾರದ ನವಿಲಾಗಿತ್ತು (peacock). ಅದು ದಂಡಕಾರಣ್ಯ ಪ್ರಾಂತ್ಯದಲ್ಲಿ ವಿಹರಿಸಿಕೊಂಡಿತ್ತು.
ಬಂಗಾರದ ನವಿಲಿನ (peacock) ಸುದ್ದಿ ಕಿವಿಯಿಂದ ಕಿವಿಗೆ ನಾಡಿನಲ್ಲಿ ಹಬ್ಬಿತು. ಕಾಶೀರಾಜನ ಪತ್ನಿಗೂ ಬಂಗಾರದ ನವಿಲಿನ ಕನಸು ಬಿದ್ದಿತು. ಅವಳು ಅದನ್ನು ತನಗೆ ತರಿಸಿಕೊಡುವಂತೆ ಕಾಶೀರಾಜನಿಗೆ ಹೇಳಿದಳು, ಬಂಗಾರದ ನವಿಲು ದಂಡಕಾರಣ್ಯದಲ್ಲಿರುವುದು ರಾಜನಿಗೆ ಗೊತ್ತಾಯಿತು.
ರಾಜನು ದಂಡಕಾರಣ್ಯ ಪ್ರಾಂತದ ಅಧಿಕಾರಿಯಾಗಿರುವವನಿಗೆ ಆ ನವಿಲನ್ನು ಹಿಡಿದು ತರಲು ಹೇಳಿಕಳಿಸಿದ. ಆ ಅಧಿಕಾರಿಯು ಒಬ್ಬ ಬೇಟೆಗಾರನನ್ನು ಕರೆಸಿ ‘ಈ ನಿನ್ನ ಪ್ರಾಂತದ ಅರಣ್ಯಭಾಗದಲ್ಲಿ ಒಂದು ಬಂಗಾರದ ನವಿಲು ಹಾರಾಡಿಕೊಂಡಿದೆಯಂತೆ. ಅದನ್ನು ಜೀವಂತವಾಗಿ ಹಿಡಿದು ತಂದು ನನಗೆ ಕೊಡು. ನಾನು ಮಹಾರಾಜರಿಂದ ನಿನಗೆ ಬಹುದೊಡ್ಡ ಬಹುಮಾನ ಕೊಡಿಸುತ್ತೇನೆ’ ಎಂದು ಹೇಳಿದನು.
ಅದಕ್ಕೆ ಬೇಟೆಗಾರನು ಒಪ್ಪಿಕೊಂಡನು. ಅವನು ಒಳ್ಳೆಯ ಬಹುಮಾನದ ಆಸೆಯಿಂದ ನವಿಲಿಗಾಗಿ ಹೊಂಚುಹಾಕಿ ಹುಡುಕಿದನು. ಆದರೆ ಅವನು ಎಷ್ಟು ಹುಡುಕಿದರೂ ನವಿಲು ಅವನ ಕಣ್ಣಿಗೆ ಬೀಳಲಿಲ್ಲ.
ಬೇಟೆಗಾರನು ಸತತವಾಗಿ ಏಳು ವರ್ಷಗಳ ಕಾಲ ಹುಡುಕಿದರೂ ನವಿಲು ಅವನ ಬಲೆಗೆ ಸಿಕ್ಕಿ ಬೀಳಲಿಲ್ಲ. ಆ ಬೇಟೆಗಾರ ಸತ್ತೂ ಆಯಿತು. ನವಿಲನ್ನು ಕೇಳಿದ ರಾಣಿಯೂ ಸತ್ತಳು. ಕನಸಿನಲ್ಲಿ ಕಂಡ ನವಿಲಿಗಾಗಿ ರಾಣಿಯು ಹಂಬಲಿಸಿ ಅದು ಸಿಗದ ಕೊರಗಿನಲ್ಲಿ ಸತ್ತಳೆಂದು ರಾಜನಿಗೆ ಕೋಪಬಂತು. ರಾಜನು ‘ದಂಡಕಾರಣ್ಯದಲ್ಲಿ ಇರುವ ಬಂಗಾರದ ನವಿಲನ್ನು ಹಿಡಿದು ಅದರ ಮಾಂಸವನ್ನು ತಿಂದವರಿಗೆ ಜರಾಮರಣಗಳು ಬರುವುದಿಲ್ಲ’ ಎಂದು ಒಂದು ಪ್ರಕಟಣೆಯನ್ನು ಬರೆಸಿ ತನ್ನ ಅರಮನೆಯ ಮಹಾದ್ವಾರದ ಮೇಲೆ ಎಲ್ಲರಿಗೂ ಕಾಣುವಂತೆ ನೇತಾಡಿಸಿದನು.
ಆ ರಾಜನು ತೀರಿಹೋದ ಮೇಲೆ ನಂತರ ಬಂದ ರಾಜರು ನವಿಲನ್ನು ಹಿಡಿಯುವ ಪ್ರಯತ್ನ ಮಾಡಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ, ಬಂಗಾರದ ನವಿಲು ಯಾರ ಕೈಗೂ ಸಿಗಲಿಲ್ಲ. ಹೀಗೆ ಆರು ತಲೆಮಾರುಗಳು ಆಗಿ ಹೋದವು.
ಯಾವ ಬೇಟೆಗಾರರಿಗೂ ಅದು ಸಿಗಲೇ ಇಲ್ಲ. ಹೀಗೆಯೇ ಮತ್ತಷ್ಟು ಕಾಲ ಕಳೆಯಿತು. ಏಳನೇ ತಲೆಮಾರಿನ ರಾಜನು ನವಿಲನ್ನು ಹಿಡಿದು ತರಲು ಬೇಟೆಗಾರರನ್ನು ನೇಮಿಸಿ ಕಳಿಸಿದನು. ಅವನಿಗೆ ಮಹಾದ್ವಾರದ ಮೇಲಿದ್ದ ಪ್ರಕಟಣೆಯನ್ನು ನೋಡಿ ನವಿಲನ್ನು ತಿನ್ನುವ ಆಸೆಯಾಗಿತ್ತು.
ಬಂಗಾರದ ನವಿಲಾಗಿದ್ದ ಬೋಧಿಸತ್ವನಿಗೆ ರಾಜನಿಗೆ ಬುದ್ದಿ ಮಾತು ಹೇಳುವ ಮನಸ್ಸಾಯಿತು. ಅದಕ್ಕಾಗಿ ಆತನು ತಾನಾಗಿಯೇ ಒಂದು ಬೇಟೆಗಾರನ ಬಲೆಗೆ ಸಿಕ್ಕಿ ಬಿದ್ದನು. ಬೇಟೆಗಾರನು ಬಂಗಾರದ ನವಿಲನ್ನು ತಂದು ರಾಜನಿಗೆ ಒಪ್ಪಿಸಿ ದೊಡ್ಡ ಬಹುಮಾನ ಪಡೆದು ಹೊರಟುಹೋದನು. ಬಂಗಾರದ ನವಿಲನ್ನು ನೋಡಿ ರಾಜನಿಗೆ ಆಶ್ಚರ್ಯವಾಯಿತು. ನವಿಲಿನ ಗಂಭೀರಭಾವವನ್ನು ನೋಡಿ ಅದರ ಮೇಲೆ ತುಂಬ ಗೌರವ ಬಂತು. ತನ್ನ ಎದುರು ಉತ್ತಮವಾದ ಪೀಠದಲ್ಲಿ ಅದನ್ನು ಕೂರಿಸಿದನು.
ನವಿಲಿನ ರೂಪದಲ್ಲಿರುವ ಬೋಧಿಸತ್ವನು ‘ರಾಜಾ! ನಿನಗೆ ನನ್ನನ್ನು ಕೊಂದು ತಿನ್ನುವ ಉದ್ದೇಶವಿರುವುದು ನನಗೆ ಗೊತ್ತಾಗಿದೆ. ನಾನು ಕೆಲವು ಬುದ್ದಿ ಮಾತುಗಳನ್ನು ಹೇಳಲು ಇಲ್ಲಿಗೆ ಬಂದಿದ್ದೇನೆ’ ಎಂದು ನುಡಿದ. ಅದಕ್ಕೆ ರಾಜನು ‘ನೀನು ಅಪೂರ್ವವಾದ ನವಿಲು. ನನಗೆ ನಿನ್ನನ್ನು ಕೊಂದು ತಿಂದು ಜರಾಮರಣಗಳಿಂದ ದೂರಾಗುವ ಉದ್ದೇಶವಿದೆ. ನಿನ್ನ ಮಾತುಗಳನ್ನು ಕೇಳಲು ನಾನೂ ಉತ್ಸುಕನಾಗಿದ್ದೇನೆ’ ಎಂದು ನುಡಿದನು.
ಅದಕ್ಕೆ ಆ ನವಿಲು ‘ಹುಚ್ಚಾ! ಹುಟ್ಟುವ ಎಲ್ಲ ಜೀವಿಗಳಿಗೆ ಜರಾಮರಣಗಳು ತಪ್ಪಿದ್ದಲ್ಲ. ನನಗೆ ಮರಣವು ಬರುವುದು ನಿಜವೆಂದಾದರೆ ನನ್ನ ಮಾಂಸ ತಿಂದವನಿಗೆ ಸಾವು ಬರುವುದಿಲ್ಲವೆಂದರೇನು ಅರ್ಥ? ನನಗೆ ಬಂಗಾರದ ನವಿಲಿನ ಜನ್ಮ ಬಂದಿರುವುದಕ್ಕೆ ನಾನು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಕೆಲಸಗಳು. ಅದರಂತೆ ನೀನು ಪ್ರಜೆಗಳಿಗೆ ಒಳ್ಳೆಯದನ್ನು ಮಾಡುತ್ತ ಧರ್ಮದಿಂದ ರಾಜ್ಯವಾಳಿದರೆ ನಿನಗೂ ಉತ್ತಮ ಜನ್ಮ ಬರುತ್ತದೆ. ಇದನ್ನು ಹೇಳಲೆಂದೇ ಇಲ್ಲಿಗೆ ನಾನಾಗಿಯೇ ಬಂದಿದ್ದೇನೆ’ ಎಂದು ಹೇಳಿತು.
ನವಿಲು ತನ್ನ ಮಾತನ್ನು ಮುಂದುವರಿಸಿ
*ರಾಜಾ! ನನಗೆ ಬಂಗಾರದ ದೇಹ ಬಂದ ಕಾರಣವನ್ನು ಹೇಳುತ್ತೇನೆ ನಾನು ನನ್ನ ಹಿಂದಿನ ಜನ್ಮದಲ್ಲಿ ಈ ರಾಜ್ಯದ ರಾಜನಾಗಿದ್ದೆ. ನನ್ನ ನ್ಯಾಯ ನೀತಿಯ ಪಾಲನೆಯಿಂದ ಧರ್ಮವು ಸರಿಯಾಗಿ ನಿಂತುಕೊಂಡಿತ್ತು. ನಾನು ಅಹಿಂಸೆಯನ್ನೂ ಪಾಲಿಸಿದ್ದೆ. ಅದರ ಫಲದಿಂದ ಈ ಜನ್ಮದಲ್ಲಿ ಬಂಗಾರದ ನವಿಲಾಗಿ ಹುಟ್ಟಿದ್ದೇನೆ’ ಎಂದು ರಾಜನಿಗೆ ಹೇಳಿತು.
ಕಾಶೀರಾಜನು ಬೆರಗಾಗಿ ‘ಏನಿದು? ನಿನ್ನ ಮಾತಿಗೆ ಯಾವುದಾದರೂ ರುಜುವಾತು ಇದೆಯೇ? ನಿನ್ನ ಮಾತನ್ನು ನಾನು ಹೇಗೆ ನಂಬಲಿ?’ ಎಂದು ನವಿಲನ್ನು ಪ್ರಶ್ನಿಸಿದನು. ಅದಕ್ಕೆ ಬಂಗಾರದ ನವಿಲು ‘ಇಲ್ಲದೆ ಉಂಟೆ? ಅರಮನೆಯ ಉದ್ಯಾನದ ಕೊಳದ ಬಳಿ ಅಗೆಸಿದರೆ ನಾನು ಅಂದು ಉಪಯೋಗಿಸಿದ ರಥವು ಕಾಣಿಸುತ್ತದೆ’ ಎಂದು ನುಡಿಯಿತು.
ಕಾಶೀರಾಜನು ಕೊಳದ ಪಕ್ಕದಲ್ಲಿ ಅಗೆಯಿಸಿದಾಗ ಹೂತು ಹೋದ ರಥವು ಕಾಣಿಸಿತು. ಅಂದಿನಿಂದ ರಾಜನು ನವಿಲಿನ ರೂಪದ ಬೋಧಿಸತ್ವನನ್ನು ತನ್ನ ಗುರುವಾಗಿ ಭಾವಿಸಿಕೊಂಡನು. ಬೋಧಿಸತ್ವನು ರಾಜನಿಗೆ ಧರ್ಮವನ್ನು ಬೋಧಿಸುತ್ತ ಇದ್ದು ತನ್ನ ಜನ್ಮವನ್ನು ಮುಗಿಸಿದನು.
ಕೃಪೆ; ಸಾಮಾಜಿಕ ಜಾಲತಾಣ.