ಬೆಂಗಳೂರು: ಗೆಳೆತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿದ್ದ ನಟ ದರ್ಶನ್‌ಗೆ (Darshan) ಕರ್ನಾಟಕ ಹೈಕೋರ್ಟ್ ಜಾಮೀನು ನೀಡುತ್ತಿದ್ದಂತೆ ಅವರ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಿಸಿದರು.
ಬೇಲ್ ಮಾಹಿತಿ ಹೊರಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು. ಕೆಲವರು ವಿವಿಧ ದೇವರುಗಳಿಗೆ ಅಭಿಷೇಕ ನೆರವೇರಿಸಿ ಪ್ರಾರ್ಥನೆ ಈಡೇರಿಸಿದರು.
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಹಾಗೂ ರಾಜರಾಜೇಶ್ವರಿನಗರದ ಮನೆಯತ್ತ ಅಭಿಮಾನಿಗಳು ಗುಂಪು, ಗುಂಪಾಗಿ ತೆರಳುತ್ತಿದ್ದಾರೆ. ಆಸ್ಪತ್ರೆ ಹಾಗೂ ಮನೆ ಬಳಿ ಅಭಿಮಾನಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿಂದ ಪೊಲೀಸರು ಮುಂಜಾಗೃತೆ ಕ್ರಮವಾಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಬೇರೆ ಬೇರೆ ಊರುಗಳಲ್ಲಿ ಅಭಿಮಾನಿಗಳು ದರ್ಶನ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಅಲ್ಲದೇ ಸ್ಥಳೀಯರಿಗೆ ಸಿಹಿ ಹಂಚುವ ಮೂಲಕ ತಮ್ಮ ಖುಷಿ ಹಂಚಿಕೊಂಡರು. ಈ ವೇಳೆ ಸಂಭ್ರಮಾಚರಣೆ ವರದಿ ಮಾಡಲು ಬಂದ ಖಾಸಗಿ ಸುದ್ದಿವಾಹಿನಿ ಒಂದರ ವರದಿಗಾರ್ತಿ ಮತ್ತು ಕ್ಯಾಮೆರಾಮೆನ್ಗೆ ಮೊದಲ ಸಿಹಿ ನೀಡಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವು ಅಭಿಮಾನಿಗಳು ದರ್ಶನ್‌ಗೆ ಬೇಗ ಜಾಮೀನು ಸಿಗಲಿ ಎಂದು ಹರಕೆ ಹೊತ್ತಿದ್ದರು.