ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra modi) ಮಿತ್ರ ಡೊನಾಲ್ಡ್ ಟ್ರಂಪ್ (Donald Trump) ಅಮೇರಿಕಾ ಅಧ್ಯಕ್ಷರಾದ ಬಳಿಕ ಕೈಗೊಳ್ಳುತ್ತಿರುವ ನಿರ್ಧಾರದಿಂದಾಗಿ ಭಾರತದ ಆರ್ಥಿಕ ಸ್ಥಿತಿ ಹಾಗೂ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರ ಮೇಲೆ ಪರಿಣಾಮ ಭೀರಿದೆ.
ಅಕ್ರಮ ವಲಸಿಗರು ಎಂಬ ಕಾರಣ ನೀಡಿ ಅಮೆರಿಕ ಬುಧವಾರ 104 ಅಕ್ರಮ ಭಾರತೀಯ ವಲಸಿಗರನ್ನು ಗಡಿಪಾರು ಮಾಡಿದೆ. ಆದರೆ ಅವರೆಲ್ಲರನ್ನು ಸಂಕೋಲೆಗಳಿಂದ ಬಂಧಿಸಿ ದೇಶದಿಂದ ಹೊರದಬ್ಬಿರುವುದು ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಇದು ಭಾರತೀಯರ ಕೆಂಗಣ್ಣಿಗೂ ಕಾರಣವಾಗಿದೆ. ಇದರ ನಡುವೆಯೇ ಅಮೆರಿಕ ಗಡಿಪಾರು ಮಾಡುತ್ತಿರುವ ವಿಡಿಯೊವನ್ನು ಅಲ್ಲಿನ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಈ ವಿಡಿಯೋ ಭಾರತೀಯರನ್ನು ಕೆರಳಿಸುವಂತೆ ಮಾಡಿದೆ. ಅವರೆಲ್ಲರನ್ನು ವಿಮಾನಗಳ ಮೂಲಕ ಭಾರತಕ್ಕೆ ಗಡಿಪಾರು ಮಾಡಲಾಗಿದೆ.
ಅಮೆರಿಕದಿಂದ ಹೀಗೆ ಗಡೀಪಾರಾಗಿ ಭಾರತದಕ್ಕೆ ಬಂದಿಳಿದ 104 ಭಾರತೀಯರ ಕೈ ಮತ್ತು ಕಾಲಿಗೆ ಬೇಡಿ ಹಾಕಿ ಕೈದಿಗಳ ರೀತಿ ಕರೆತಂದಿದ್ದನ್ನು ಖಂಡಿಸಿ ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ಗುರುವಾರ ಭಾರೀ ಪ್ರತಿಭಟನೆ ನಡೆಸಿವೆ.
ಈ ಬಗ್ಗೆ ಅಮೇರಿಕಾದ ವಿರುದ್ಧ ಆಕ್ಷೇಪ ಸಲ್ಲಿಸಬೇಕಾದ ಕೇಂದ್ರದ ಮೋದಿ ಸರ್ಕಾರ ಇದೇನ್ ಹೊಸತಲ್ಲ ಎಂಬಂತೆ ಸಮರ್ಥನೆಗಿಳಿದಿರುವುದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ವಿರೋಧ ಪಕ್ಷಗಳ ಈ ಪ್ರತಿಭಟನೆಗೆ ಉತ್ತರದ ರೂಪದಲ್ಲಿ ಈ ಮಾಹಿತಿ ನೀಡಿರುವ ರಾಜ್ಯಸಭೆಗೆ ವಿದೇಶಾಂಗ ಸಚಿವ ಜೈ ಶಂಕರ್, ಈ ಬೆಳವಣಿಗೆ ಇದೇ ಮೊದಲಲ್ಲ. ಕಳೆದ ಹಲವು ವರ್ಷಗಳಿಂದ ಗಡೀಪಾರು ಪ್ರಕ್ರಿಯೆ ನಡೆಯುತ್ತಲೇ ಇದೆ ಎಂದು ಸಮರ್ಥನೆಗಿಳಿದಿದ್ದಾರೆ.
ಇನ್ನು ಈ ಹಿಂದಿನ ಯಾವ ಯಾವ ವರ್ಷಗಳಲ್ಲಿ ಎಷ್ಟೆಷ್ಟು ಭಾರತೀಯರು ಗಡಿಪಾರಾಗಿದ್ದಾರೆ ಎಂದು ಅಂಕಿ-ಅಂಶಗಳನ್ನು ಕೂಡ ರಾಜ್ಯಸಭೆಯ ಮುಂದಿಟ್ಟಿದ್ದಾರೆ.
ಈ ಪ್ರಕಾರ ಕಳೆದ 2009 ರಿಂದ ಇಲ್ಲಿಯ ತನಕ 15 ಸಾವಿರಕ್ಕೂ ಅಧಿಕ ಭಾರತೀಯರು ಅಮೆರಿಕಾದಿಂದ ಗಡೀಪಾರಾಗಿದ್ದಾರೆ.
ಈ ವೇಳೆ ಅಕ್ರಮ ವಲಸಿಗರಿಗೆ ಅವರ ಕಾನೂನು ಪಾಲನೆಯಲ್ಲಿ ಕೋಳ ತೊಡಿಸುವುದು ಸೇರಿದೆ. ಆದರೆ ಮಹಿಳೆ ಮತ್ತು ಮಕ್ಕಳಿಗೆ ಬೇಡಿ ತೊಡಿಸದಂತೆ ಅಲ್ಲಿನ ಪ್ರಾಧಿಕಾರಕ್ಕೆ ತಿಳಿಸಲಾಗಿದೆ ಎಂದಿದ್ದಾರೆ.