ದೊಡ್ಡಬಳ್ಳಾಪುರ (Doddaballapura): ಬಿಸಿಲ ಬಿಸಿಯಿಂದ ಬೇಸತ್ತಿದ್ದ ನಗರ ವ್ಯಾಪ್ತಿಯ ಜನರಿಗೆ ವರುಣ ಕೂಲ್ ಕೂಲ್ ಮಾಡಿದ್ದಾನೆ. ತಾಲೂಕಿನ ಕೆಲವೆಡೆ ಧಾರಾಕಾರ ಮಳೆ ಆಗಿದೆ.
ಭಾರತೀಯ ಹವಾಮಾನ ಇಲಾಖೆಯೂ ಇಂದು ಹಾಗೂ ನಾಳೆ ಮಳೆ ಅಲರ್ಟ್ ನೀಡಿತ್ತು. ಅದರಂತೆ ನಗರ ಹಾಗೂ ಕೆಲವೆಡೆ ವರುಣ ಭರ್ಜರಿಯಾಗಿ ಆರ್ಭಟಿಸಿದ್ದಾನೆ.
ಬೇಸಿಗೆ ಆರಂಭವಾಗಿದ್ದರಿಂದ ಬಿಸಿಲು ನೆತ್ತಿ ಸುಡುತ್ತಿತ್ತು. ಇದರಿಂದ ನಗರ ವಾಸಿಗಳು ಎಂಥ ಬಿಸಿಲು ಎನ್ನುತ್ತಿರುವಾಗಲೇ ಮಳೆರಾಯ ತಂಪೆರೆದಿದ್ದಾನೆ.
ದೊಡ್ಡಬಳ್ಳಾಪುರ ನಗರ, ಚಿಕ್ಕ ಮಧುರೆ, ದೊಡ್ಡಬೆಳವಂಗಲ ಭಾಗಗಳಲ್ಲಿ ಅಬ್ಬರಿಸಿದ್ದರೆ, ಸಾಸಲು ಮತ್ತು ತೂಬಗೆರೆ ವ್ಯಾಪ್ತಿಯಲ್ಲಿ ಗಾಳಿ, ತಂಪು ವಾತಾವರಣ ಕಂಡು ಬಂದಿದೆ.
ರೈತರ ಪರದಾಟ
ಶನಿವಾರ ಸಂಜೆ ಏಕಾಏಕಿ ತುಂತುರು ಮಳೆ, ಸಂಜೆ ವೇಳೆಗೆ ಮಿಂಚು ಗುಡುಗು ಸಹಿತ ಬಿರುಸುಗೊಂಡಿತು. ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಮಾವಿನ ಈಚುಗಳು ಉದುರಿರುವ ಬಗ್ಗೆ ರೈತರು ತಿಳಿಸಿದ್ದಾರೆ.
ಶನಿವಾರ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ರೈತರು ಟ್ರ್ಯಾಕ್ಟರ್ಗಳಲ್ಲಿ ರಾಗಿ ಚೀಲಗಳನ್ನು ತುಂಬಿ ಕೊಂಡು ಬಂದಿದ್ದರು. ಸಂಜೆ ಮಳೆ ಬಂದಿದ್ದರಿಂದ ಟ್ರ್ಯಾಕ್ಟರ್ಗಳಿಗೆ ಟಾರ್ಪಲಿನ್ ಗಳನ್ನು ಹೊದ್ದಿಸಿ ಸಾಲಾಗಿ ನಿಲ್ಲಿಸುವಂತಾಗಿತ್ತು.
ಸಂಜೆ 6 ಗಂಟೆವರೆಗೂ ಮಳೆ ಬೀಳುತ್ತಲೇ ಇದ್ದುದ್ದರಿಂದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಹಾಗೂ ವಿವಿಧ ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಮನೆಗಳ ಕಡೆಗೆ ಹೋಗಲು ಪರದಾಡುತ್ತಿದ್ದ ದಶ್ಯ ಕಂಡು ಬಂತು.