ದೊಡ್ಡಬಳ್ಳಾಪುರ (Harithalekhani): ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿರುವ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ (KGB) ಕಳವು ಪ್ರಕರಣದ ಕುರಿತಂತೆ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಮಾರು 12 ಮಂದಿ ಲೂಟಿ ಕೋರರ ಪೈಕಿ 4 ಮಂದಿ ಆರೋಪಿಗಳನ್ನು ಡಿವೈಎಸ್ಪಿ ರವಿ ಅವರ ನೇತೃತ್ವದಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರ ತಂಡ ಬಂಧಿಸಿದೆ.
ಈ ಮುಂಚೆ ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದ ತಂಡ ಮೂವರು ಖದೀಮರನ್ನು ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯ ಅಲಾಪುರ್ ನಲ್ಲಿ ಬಂಧಿಸಿದ್ದರು.
ಇದೀಗ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಉತ್ತರಪ್ರದೇಶ ಮೂಲದ ಗುಡ್ಡು ಅಲಿಯಾಸ್ ಕಾಲಿಯಾ, ಕಮ್ರುದ್ದೀನ್ ಅಲಿಯಾಸ್ ಬಾಬು ಸರೇಲಿ, ಸರ್ತಾಜ್, ಹಸ್ರತ್ ಅಲಿ, ಅಸ್ಲಮ್ ಅಲಿಯಾಸ್ ಟನ್ ಟನ್ ಬಂಧಿತ ಆರೋಪಿಗಳು.
ದಾವಣಗೆರೆಯಲ್ಲಿ ನಡೆದಿದ್ದ ಕಳವು ಬ್ಯಾಂಕ್ ಕಳವು ಪ್ರಕರಣದಲ್ಲಿ ಈ ನಾಲ್ವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈ ಮುಂಚೆ ಹೊಸಹಳ್ಳಿ ಪೊಲೀಸರು ಬಂಧಿಸಿದ್ದ ಮೂವರು ಆರೋಪಿಗಳು ನೀಡಿದ್ದ ಹೆಸರು ಆಧಾರದ ಮೇಲೆ ಈ ನಾಲ್ವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಹೊಸಹಳ್ಳಿ ಪೊಲೀಸರು ವಶಕ್ಕೆ ಪಡೆದು ಕರೆತಂದಿದ್ದಾರೆ.
ಬಂಧಿತ ಆರೋಪಿಗಳನ್ನು ಶನಿವಾರ ಹೊಸಹಳ್ಳಿಯಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸ್ಥಳ ಮಹಜರು ಮಾಡಿಸಿ, ನಗರದ ಸರ್ಕಾರಿ ಆರೋಗ್ಯ ತಪಾಸಣೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಈ ಬಂಧಿತರು ಕರ್ನಾಟಕದ 7 ಕಡೆ ಸೇರಿದಂತೆ ತಮಿಳುನಾಡುಣ ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಸುತ್ತಿರುವ ಬ್ಯಾಂಕ್ ಗಳನ್ನು ಟಾರ್ಗೆಟ್ ಮಾಡಿ ಲೂಟಿ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.
ಪ್ರಸ್ತುತ ಹೊಸಹಳ್ಳಿ ಬ್ಯಾಂಕ್ ಲೂಟಿ ಪ್ರಕರಣದ 12 ಮಂದಿ ಆರೋಪಿಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದ್ದು, ಉಳಿದ 5 ಮಂದಿ ಆರೋಪಿಗಳಿಗೆ ಬಲೆ ಬೀಸಿದ್ದು, ಈ ವರೆಗೆ ಕಳುವಾದ ಚಿನ್ನಾಭರಣ, ನಗದು ಪತ್ತೆಯಾಗಿಲ್ಲ.
ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದ ಕಳವು ಪ್ರಕರಣ
2022ರ ನವೆಂಬರ್ 25 ರಂದು ಸಿನಿಮೀಯ ಶೈಲಿಯಲ್ಲಿ ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ್ ಬ್ಯಾಂಕ್ ಬಾಗಿಲನ್ನು ಗ್ಯಾಸ್ ಕಟರ್ನಿಂದ ಕತ್ತರಿಸಿ ಸುಮಾರು ರೂ 3.50 ಕೋಟಿ ಚಿನ್ನಾಭರಣ ಹಾಗೂ ಸುಮಾರು ರೂ14 ಲಕ್ಷ ನಗದು ಲೂಟಿ ಮಾಡಿ ಪರಾರಿಯಾಗಿದ್ದರು.
ಕಳ್ಳರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ಬ್ಯಾಂಕಿನಲ್ಲಿದ್ದ ಸಿಸಿಟಿವಿ ವಿಡಿಯೋ ಪರಿಶೀಲನೆ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ತನಿಖಾ ವಿಧಾನಗಳನ್ನು ಅನುಸರಿಸಲಾಗಿದೆ.
ಗ್ರಾಮೀಣ, ಗಡಿ ಭಾಗದ ಬ್ಯಾಂಕ್ ಗಳಲ್ಲಿಅಗತ್ಯ ಇರುವ ಸುರಕ್ಷತೆಯ ಯಾವುದೇ ಮಾನದಂಡಗಳು ಸಹ ಇಲ್ಲದೇ ಇರುವುದೇ ಕಳ್ಳರು ಈ ಬ್ಯಾಂಕನ್ನೇ ಕಳ್ಳತನಕ್ಕೆ ಕೃತ್ಯಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು.
ಇಷ್ಟೊಂದು ದೊಡ್ಡ ಮೊತ್ತದ ಚಿನ್ನಾಭರಣಗಳನ್ನು ತಾಲ್ಲೂಕು ಕೇಂದ್ರದಿಂದ 22 ಕಿ.ಮೀ ದೂರದ ಹಳ್ಳಿಯಲ್ಲಿನ ಬ್ಯಾಂಕಿನಲ್ಲಿ ಇಡುವ ಅಗತ್ಯ ಇರಲಿಲ್ಲ. ಈ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಕನಿಷ್ಠ ಮುನ್ನೆಚ್ಚರಿಕೆಯನ್ನಾದರು ವಹಿಸಬೇಕಿತ್ತು ಎನ್ನುವ ಮಾತುಗಳು ಪೊಲೀಸರು ಹಾಗೂ ಬ್ಯಾಂಕಿನ ಗ್ರಾಹಕರಿಂದ ಕೇಳಿಬಂದಿತ್ತು.
ಈ ಕುರಿತು ಗ್ರಾಹಕರು ಪ್ರತಿಭಟನೆ ನಡೆಸಿ, ಹಿರಿಯ ಅಧಿಕಾರಿಗಳು, ಗ್ರಾಮದ ಮುಖಂಡರ ಸಮ್ಮುಖದಲ್ಲಿ ಕಳುವಾದ ಒಡವೆಗಳ ಬದಲಿಗೆ ಹಣ ಪಡೆದಿದ್ದರು.