ಬೆಂಗಳೂರು: 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇರುವ, ಎರಡೆರಡು ಬಾರಿ ಮುಖ್ಯಮಂತ್ರಿ ಆಗಿರುವ ಸಿಎಂ ಸಿದ್ದರಾಮಯ್ಯನವರಿಗೆ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದಿರುವುದು ಕರ್ನಾಟಕದ ದೌರ್ಭಾಗ್ಯ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ (R (Ashoka) ಹೇಳಿದ್ದಾರೆ.
ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜೊತೆ ಯುದ್ಧದ ಅಗತ್ಯವಿಲ್ಲ, ಅದರ ಬದಲು ಕಟ್ಟುನಿಟ್ಟಿನ ಕ್ರಮ ಹಾಗೂ ದೇಶದಲ್ಲಿ ಶಾಂತಿ ಭದ್ರತೆ ಮುಖ್ಯ ಎಂಬ ಹೇಳಿಕೆ ಕುರಿತು ಆರ್.ಅಶೋಕ್ ಟ್ವಿಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಇಸ್ಲಾಮಿಕ್ ಉಗ್ರರ ದಾಳಿ ಆಗಿದೆ. ಗಡಿಯಾಚೆಗಿನ ನುಸುಳುಕೋರರು ನಡೆಸಿರುವ ಈ ಕೃತ್ಯ ಈಗ ಕೇವಲ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿ ಉಳಿದಿಲ್ಲ. ಇದು ಭಾರತದ ಸಾರ್ವಭೌಮತೆಗೆ, ಘನತೆಗೆ ಎಸೆದಿರುವ ಸವಾಲು.
ಇಂತಹ ಸನ್ನಿವೇಶದಲ್ಲಿ ಇಡೀ ದೇಶವೇ ಪಕ್ಷಾತೀತವಾಗಿ ಒಂದು ದನಿಯಾಗಿರಬೇಕು. ಇದಕ್ಕಾಗಿಯೇ ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ನಡೆಸಿ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದೆ.
ನಿಮ್ಮದೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ಸೇರಿದಂತೆ ಎಲ್ಲ ಪಕ್ಷಗಳೂ ಸರ್ವಾನುಮತದಿಂದ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನ ಬೆಂಬಲಿಸುತ್ತೇವೆ ಎಂದು ಹೇಳಿವೆ.
ನಮ್ಮ ದೇಶದಲ್ಲಿ ವೃತ್ತಿಪರ ಸೇನಾಪಡೆಗಳಿವೆ. ಯಾವ ಸಂದರ್ಭದಲ್ಲಿ ಎಂತಹ ಕ್ರಮ ಕೈಗೊಳ್ಳಬೇಕು ಎನ್ನುವ ಪರಿಣಿತಿ, ಅನುಭವ ನಮ್ಮ ಸೇನಾಪಡೆಗಳಿವೆ. ಈ ವಿಷಯದಲ್ಲಿ ನಿಮ್ಮ ಸಲಹೆಯ ಅಗತ್ಯವೂ ಇಲ್ಲ, ಸಲಹೆ ನೀಡುವ ಯಾವುದೇ ಅರ್ಹತೆಯೂ ತಮಗಿಲ್ಲ.
ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾದೇಶಿ, ರೋಹಿಂಗ್ಯ, ಪಾಕಿಸ್ತಾನಿ ಅಕ್ರಮ ವಲಸಿಗರು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಮೊದಲು ಅವರನ್ನ ಗುರುತಿಸಿ, ಗಡೀಪಾರು ಮಾಡಿ ಕನ್ನಡಿಗರ ಸುರಕ್ಷತೆ ಕಾಪಾಡುವ ಕಡೆ ಗಮನ ಕೊಡಿ. ಸುಮ್ಮನೆ ತಮ್ಮದಲ್ಲದ ವಿಷಯದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸಬೇಡಿ ಎಂದಿದ್ದಾರೆ.