ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಡಿಪೋಗೆ ಸೇರಿದ KSRTC ಬಸ್ ಮುಂಭಾಗದಲ್ಲಿಯೇ ಬೃಹತ್ ಮರದ ಉರುಳಿ ಬಿದ್ದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ.
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ತೆರಳುವ ವೇಳೆ ಗುಟ್ಟಹಳ್ಳಿ ಅರಮನೆ ಮೈದಾನದ ಬಳಿ ಏಕಾಏಕಿ ಮರದ ಮುರಿದು ಬಿದ್ದಿದೆ. ಇದನ್ನು ಗಮನಿಸಿದ ಚಾಲಕ ಏಕಾಏಕಿ ಬಸ್ಸನ್ನು ಬಲಕ್ಕೆ ಎಳೆದು, ಬ್ರೇಕ್ ಹಾಕಿದ್ದಾರೆ, ಈ ವೇಳೆ ಮರದ ಕೊಂಬೆಗಳು ಬಸ್ಸಿನ ಮೇಲೆ ಹಾಗೂ ಮುಂಭಾಗದಲ್ಲಿ ಬಿದ್ದಿದೆ. ಅದೃಷ್ಟವಶಾತ್ ದೊಡ್ಡ ಕೊಂಬೆಗಳಿಗೆ ಬಸ್ ಸಿಲುಕದ ಕಾರಣ ಪ್ರಯಾಣಿಕರು ಪಾರಾಗಿದ್ದಾರೆ.
ಘಟನೆಯಲ್ಲಿ KSRTC ಬಸ್ ಮುಂಭಾಗದ ಗಾಜಿಗೆ ಹಾನಿಯಾಗಿದೆ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕ ನ್ಯಾಯವಾದಿ ಕಿಟ್ಟಪ್ಪ ಲಕ್ಷ್ಮೀನಾರಾಯಣ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಅನೇಕ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾಗಿದ್ದರೆ, ವೈಟ್ ಫೀಲ್ಡ್ ಬಳಿ ಗೋಡೆ ಕುಸಿದು ಖಾಸಗಿ ಕಂಪನಿಯ ಉದ್ಯೋಗಿ 35 ವರ್ಷದ ಶಶಿಕಲಾ ಎನ್ನುವವರು ಸಾವನಪ್ಪಿದ್ದಾರೆ.
ಇಂದು ಸಂಜೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಜಂಟಿ ಸಮೀಕ್ಷೆ ನಡೆಸಲಿದ್ದಾರೆ.