ಬೆಂಗಳೂರು: ತುಮಕೂರಿನ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ 3 ಕಾಲೇಜುಗಳಿಗೆ ಜಾರಿ ನಿರ್ದೇಶನಾಲಯದ (E.D) ಅಧಿಕಾರಿಗಳು ಇಂದು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕುರಿತಂತೆ ವಿಶ್ವವಿದ್ಯಾಲಯದ ಕುಲಪತಿ, ಗೃಹಸಚಿವ ಡಾ.ಜಿ ಪರಮೇಶ್ವರ (G Parameshwara) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನಿನ್ನೆಯ ದಿನ ನಮ್ಮ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನಮ್ಮ ಸಂಸ್ಥೆಯ ಮೂರು ಕಾಲೇಜುಗಳಿಗೆ ಭೇಟಿ ನೀಡಿದ್ದಾರೆ. ಯಾವ ವಿಚಾರಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ.
ಕಾಲೇಜಿಗೆ ಭೇಟಿ ನೀಡಿ, ಕೋರ್ಸ್‌ಗಳ ಬಗ್ಗೆ ಕೇಳಿದ್ದಾರೆ, ಇ.ಡಿ ಅಧಿಕಾರಿಗಳು ಎಷ್ಟು ವರ್ಷದ ಅಕೌಂಟ್ಸ್ ಕೇಳುತ್ತಾರೋ. ಯಾವ ವರ್ಷದ ಲೆಕ್ಕ ಕೇಳುತ್ತಾರೆಯೋ ಅದನ್ನೆಲ್ಲ ಕೊಡಿ ಎಂದು ಸೂಚಿಸಿದ್ದೇನೆ ಎಂದರು.
ದಾಳಿಯ ಉದ್ದೇಶ ಗೊತ್ತಿಲ್ಲ, ಅವರಿಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇವೆ. ಯಾವುದನ್ನು ಮುಚ್ಚಿಡುವಂತದ್ದೇನು ಇಲ್ಲ. ನಾನು ಮೊದಲಿನಿಂದ ಕಾನೂನಿಗೆ ಬೆಲೆ ಕೊಟ್ಟು ಬಂದವನು. ದೇಶದಲ್ಲಿನ ಕಾನೂನು ಎಲ್ಲರಿಗೂ ಒಂದೇ, ದೊಡ್ಡವರಿಗೆ ಒಂದು, ಸಣ್ಣವರಿಗೆ ಒಂದು ಕಾನೂನು ಇಲ್ಲ. ಕಾನೂನಿಗೆ ಗೌರವ ಕೊಡುತ್ತೇನೆ.
ಸಂಸ್ಥೆಯ ವಿಚಾರ ಆದ ಕಾರಣ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ. ಇ.ಡಿ ಅಧಿಕಾರಿಗಳು ಏನು ಬೇಕಾದರೂ ಪರಿಶೀಲನೆ ಮಾಡಲಿ. ನಾವು ಕೂಡ ಸಹಕಾರ ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ದಲಿತ ಎಂಬ ಕಾರಣಕ್ಕೆ ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ರಣದೀಪ್ ಸುರ್ಜೇವಾಲ ಆರೋಪ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ನನಗೆ ಅದು ಗೊತ್ತಿಲ್ಲ ಈ ಸಂದರ್ಭದಲ್ಲಿ ಅದೆಲ್ಲ ಹೇಳಲು ಹೋವುದಿಲ್ಲ ಅವರೆಲ್ಲ ಜಾತಿ ನೋಡಿ ಬರುವುದಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಈಗ ನಾನು ಏನೂ ಹೇಳುವುದಿಲ್ಲ ಎಂದರು.