ದೊಡ್ಡಬಳ್ಳಾಪುರ: ಇಷ್ಟು ದಿನ ಜಾನುವಾರಗಳ ಮೇಲೆ ಚಿರತೆ (Leopard) ದಾಳಿ ಕುರಿತು ತಾಲೂಕಿನಲ್ಲಿ ಸುದ್ದಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೈತನ ಮೇಲೆ ಕರಡಿ (Bear) ದಾಳಿ ನಡೆಸಿರುವ ಘಟನೆ ತಾಲೂಕಿನ ಕುಕ್ಕಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹೌದು ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿಯ ಕುಕ್ಕಲಹಳ್ಳಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಸುಮಾರು 55 ವರ್ಷದ ಲಕ್ಷ್ಮೀನರಸಪ್ಪ ಎಂಬ ರೈತ ಇಂದು (ಮೇ.29) ಮಧ್ಯಾಹ್ನ ಕುಕ್ಕಲಹಳ್ಳಿ ಗ್ರಾಮದ ಹೊರವಲಯದಲ್ಲಿ ತನ್ನ ಜಮೀನಿಗೆ ತೆರಳಿದ್ದು, ಜಮೀನಿನಲ್ಲಿರುವ ಹಲಸಿನ ಹಣ್ಣಿನ ಮರದ ಬಳಿ ತೆರಳುವ ವೇಳೆ ಏಕಾಏಕಿ ಕರಡಿ ಎದುರಾಗಿ ದಾಳಿ ನಡೆಸಿದೆ.
ಈ ವೇಳೆ ಕರಡಿ ಹಾಗೂ ರೈತ ಲಕ್ಷ್ಮೀನರಸಪ್ಪರ ನಡುವೆ ಸೆಣೆಸಾಟ ನಡೆದಿದ್ದು, ಲಕ್ಷ್ಮೀನರಸಪ್ಪ ಹೇಗೋ ಪಾರಾಗಿ ಬಂದಿದ್ದಾರೆ.
ಘಟನೆಯಲ್ಲಿ ರೈತ ಲಕ್ಷ್ಮೀನರಪ್ಪರಿಗೆ ಹಣೆ, ಮುಖ, ಭುಜಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ ಹೊಸಹಳ್ಳಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಇನ್ನೂ ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಕೃಷ್ಣೇಗೌಡ, ಹೆಚ್.ಡಿ.ಲಕ್ಷ್ಮಿ, ಹನುಮಂತರಾಯಪ್ಪ.ಬಿ., ಗಸ್ತು ಅರಣ್ಯ ಪಾಲಕರಾದ ಎನ್., ಬಸವರಾಜು, ಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.