ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ “ವಿಶ್ವ ಬೈಸಿಕಲ್ ದಿನ”ವನ್ನು (World Bicycle Day) ಆಚರಿಸಲಾಯಿತು.
ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಸ್ವರೂಪ್ ಎಸ್. ಮಾತನಾಡಿ, ಇಂದಿನ ಕಲುಷಿತವಾದ ಹವಾಮಾನಕ್ಕೆ ಕರಣವಾದ ವಾಹನಗಳ ಹೊಗೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಇದರಿಂದ ಹೊರಬರಲು, ವಾಯುಮಾಲಿನ್ಯ ತಡೆಗಟ್ಟಲು ಬೈಸಿಕಲ್ ಎಷ್ಟು ಮುಖ್ಯ ಎಂದು ವಿವರಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಸುಬ್ರಮಣ್ಯ ಮಾತನಾಡಿ, ಪ್ರಸ್ತುತ ಸಾಮಾಜಿಕ ಜೀವನಕ್ಕೆ ಬೈಸಿಕಲ್ ಎಷ್ಟು ಅವಶ್ಯಕ ಮತ್ತು ಬೈಸಿಕಲ್ ಅನ್ನು ಪ್ರತಿದಿನ ಚಲಾಯಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಅಗುವ ಒಳ್ಳೆಯ ಅನುಕೂಲಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ನಿಧಾನಗತಿಯ ಸೈಕಲ್ ಚಲನೆ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಕೌಶಲವನ್ನು ಪ್ರದರ್ಶಿಸಿದರು. ಈ ವೇಳೆ ಮಕ್ಕಳ ಹರ್ಷೋದ್ಗಾರ ಮುಗಿಲು ಮುಟ್ಟುವಂತೆ ಇತ್ತು.
ಸ್ಪರ್ಧೆಗೆ ಚಾಲನೆ ಕೊಟ್ಟ ಪ್ರಾಂಶುಪಾಲರಾದ ರೆಮ್ಯ ಬಿ ವಿ ಮಾತನಾಡಿ, “ವಿಶ್ವ ಸಂಸ್ಥೆಯು ಏಪ್ರಿಲ್ 2018 ರಿಂದ ಪ್ರತಿವರ್ಷ ಜೂನ್ 03 ರಂದು “ವಿಶ್ವ ಬೈಸಿಕಲ್ ದಿನ” ವಾಗಿ ಆಚರಿಸಲಾಗುವುದು ಎಂದು ಘೋಷಣೆ ಮಾಡಿತು. ಇದೊಂದು ಪರಿಸರ ಸ್ನೇಹಿ ಹಾಗೂ ಇಂಧನ ರಹಿತ ಸಾರಿಗೆ ವಿಧಾನವಾಗಿದೆ. ಜೊತೆಗೆ ಮಾನವನ ಸಾರ್ವಕಾಲಿಕ ಮಿತ್ರ. ಇದನ್ನು ದಿನನಿತ್ಯ ಬಳಸುವುದರಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗುವ ಉತ್ತಮ ವ್ಯಾಯಾಮದ ಮಾರ್ಗವಾಗಿದೆ” ಎಂದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.